ರಾಜ್ಯದಲ್ಲಿ ಭಯೋತ್ಪಾದನಾ ಜಾಲವನ್ನು ಭೇದಿಸುವ ಕಾರ್ಯಾಚರಣೆಯಲ್ಲಿರುವ ಕರ್ನಾಟಕ ಪೊಲೀಸರು, ಹುಬ್ಬಳ್ಳಿಯಲ್ಲಿ ಉಗ್ರಗಾಮಿಗಳು ಮನೆಯೊಂದರಲ್ಲಿ ಅವಿತಿರಿಸಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ಪತ್ತೆಹಚ್ಚಿದ್ದಾರೆ.
ತನಿಖೆಯ ವೇಳೆ ಐವರು ಉಗ್ರಗಾಮಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಸಿಮ್ಲಾ ನಗರದಲ್ಲಿ ಶುಕ್ರವಾರ ರಾತ್ರಿ ಮನೆಯೊಂದರಲ್ಲಿ ಅವಿತಿರಿಸಿದ್ದ ಸ್ಫೋಟಕವನ್ನು ಪತ್ತೆ ಹಚ್ಚಿದರು. ಅವುಗಳಲ್ಲಿ 150 ಡಿಟೋನೇಟರ್‌ಗಳು ಮತ್ತು 50 ಜಿಲೆಟಿನ್ ಕಡ್ಡಿಗಳು ಸೇರಿವೆ ಎಂದು ಡಿಜಿಪಿ (ಸಿಒಡಿ) ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ ಇಂದೋರಿನಲ್ಲಿ ಬಂಧಿತನಾಗಿದ್ದ ಅದ್ನಾನ್ ಜತೆಗೆ, ಸಿಬ್ಲಿ, ಮಿರ್ಜಾ ಬೇಗ್, ಸಫ್ದರ್ ಹುಸೇನ್ ನಾಗೊರಿ ಮತ್ತು ಕಮರುದ್ದೀನಿ ಅವರನ್ನೂ ಭಯೋತ್ಪಾದಕ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಮತ್ತಷ್ಟು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದವರು ಹೇಳಿದರು.
ಕರ್ನಾಟಕ ಮತ್ತು ಗೋವಾದ ವಿವಿಧ ಭಾಗಗಳಲ್ಲಿ ಸ್ಫೋಟ ನಡೆಸುವ ಯೋಜನೆಗಳ ಕುರಿತು ಈ ಉಗ್ರರು ಈಗಾಗಲೇ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಬಂಧಿತರು ತಮ್ಮ ಜಾಲದ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದರು.
|