ಬಿಜೆಪಿ ಮೇಲೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿದ್ದೇ ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದು ಹೇಳುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆಗೆ ನಾಂದಿ ಹಾಡಿದ್ದಾರೆ.
ಇಂದು (ಸೋಮವಾರ) ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಜನತೆಗೆ ಅಪಾಯ ತಪ್ಪಿದ್ದಲ್ಲ. ದ್ವೇಷದ ಜ್ವಾಲೆ ಬೀಸುತ್ತಿರುವ ಬಿಜೆಪಿ ಒಂದು ಅಪಾಯಕಾರಿ ಪಕ್ಷ ಎಂದು ಕಾಂಗ್ರೆಸ್‌ಗೆ ನೇರ ಸ್ಪರ್ಧಿ ಬಿಜೆಪಿ ಎನ್ನುವಂತೆ ಮಾತನಾಡಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿ ಇಲ್ಲಿಯವರೆಗೆ ನಡೆದ ಹತ್ಯೆಗಳ ಕುರಿತು ಅಂಕಿ ಅಂಶಗಳ ಸಹಿತವಾಗಿ ವಿವರಿಸಿದ ಅವರು, ರಾಜ್ಯಕ್ಕೆ ಮೋದಿಯಂತಹ ಸರ್ಕಾರ ಬೇಡ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 30 ಸ್ಥಾನ ಸಿಗುವುದು ಕಷ್ಟ. ಇತ್ತ ಜೆಡಿಎಸ್ ಚುನಾವಣೆಯಲ್ಲಿ ಮೇಲೇಳುವುದೇ ಇಲ್ಲ ಎಂದು ಭವಿಷ್ಯ ನುಡಿದರು.
ಇತ್ತೀಚೆಗೆ ಸಾರಾಯಿ ನಿಷೇಧ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದ ಮೊಯಿಲಿ, ಇಂದು ಅದೇ ಮಾತನ್ನು ಮತ್ತೊಮ್ಮೆ ವಿವರಿಸಿದರು. ವೈಯಕ್ತಿಕವಾಗಿ ಸಾರಾಯಿಯನ್ನು ಜಾರಿಗೊಳಿಸುವುದು ಇಷ್ಟವಿಲ್ಲ. ಆದರೆ ಪಕ್ಷದ ನೀತಿಯಿಂದ ಈ ಬಗ್ಗೆ ಇನ್ನೊಮ್ಮೆ ಪರೀಶೀಲಿಸಲಾಗುವುದು ಎಂದು ತಿಳಿಸಿದರು.
ಈ ಮೊದಲು ಅಯೋಧ್ಯೆಯಲ್ಲಿ ರಾಮ ಹುಂಡಿ ಮತ್ತು ಮೂರ್ತಿ ಕಳವು ಪ್ರಕರಣದ ಬಗ್ಗೆ ಮೋಯ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
|