ವಿದ್ಯಾರಣ್ಯ ಪೊಲೀಸರು ಇಂದು(ಸೋಮವಾರ) ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 20ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಘಟನೆಯಲ್ಲಿ ಬೆಂಗಳೂರಿನವರಾದ ರಂಗನಾಥ್ ಹಾಗೂ ಮುನಿರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಿಂದ ನಂಜನಗೂಡಿಗೆ ಕಾರಿನಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ನಂಜನಗೂಡು ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
ವೈದ್ಯಕೀಯ ಸೀಟಿಗಾಗಿ ಮಠವೊಂದಕ್ಕೆ ಹಣ ನೀಡಲು ತಂದಿದ್ದು, ಕೆಲಸ ಅಗದ ಕಾರಣ ವಾಪಸ್ ತೆಗೆದುಕೊಂಡು ಹೋಗುತ್ತಿರುವುದಾಗಿ ಬಂಧಿತರಿಬ್ಬರು ತಿಳಿಸಿದ್ದಾರೆ. ಆದರೆ ಚುನಾವಣೆಗಾಗಿ ಈ ಹಣವನ್ನು ಒಯ್ಯಲಾಗುತ್ತಿತ್ತು ಎಂಬ ಸಂಶಯದಿಂದ ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.
ಈ ಮಧ್ಯೆ, ಅಕ್ರಮವಾಗಿ ಸುಮಾರು 49ಸಾವಿರ ಹಣವನ್ನು ಸ್ಕಾರ್ಫಿಯೋದಲ್ಲಿ ಸಾಗಿಸುತ್ತಿದ್ದ ಐವರನ್ನು ಮೈಸೂರಿನ ಸಾಲುಂಡಿ ಬಳಿ ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂಜೇಗೌಡ ಬೆಂಬಲಿಗರು ಎಂದು ಗುರುತಿಸಲಾಗಿದೆ. ಈ ಹಣವನ್ನು ವ್ಯವಹಾರದ ಉದ್ದೇಶದಿಂದ ತಂದಿರುವುದಾಗಿ ಬಂಧಿತರು ತಿಳಿಸಿದ್ದರೂ, ಅದರಲ್ಲಿ ಬಿಜೆಪಿಗೆ ಸೇರಿದ ಕರಪತ್ರಗಳು ದೊರೆತಿರುವುದರಿಂದ ಇದು ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
|