ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ಹೈದರಾಬಾದ್-ಕರ್ನಾಟಕದ ಪ್ರಮುಖ ನಾಯಕ ವೈಜನಾಥ್ ಪಾಟೀಲ್ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾದಂತಾಗಿದೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಇಂದು (ಸೋಮವಾರ) ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್‌ನ ಮುಖಂಡರಾಗಿರುವ ಎಂ.ರಘುಪತಿಯವರನ್ನು ಪಕ್ಷಕ್ಕೆ ಕರೆಸಿಕೊಂಡ ಬಳಿಕ ಮತನಾಡಿದ ನಾಯ್ಡು, ವೈಜನಾಥ್ ಸೇರ್ಪಡೆ ವಿಷಯ ಮಾತುಕತೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ವೈಜನಾಥ್ ಪಾಟೀಲ್ ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ಆದರೆ ಆ ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತಿರುಗಿ ಬಿದ್ದ ವೈಜನಾಥ್, ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈಗ ಮತ್ತೆ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ಪಾಟೀಲ್ ಬಿಜೆಪಿ ಬಾಗಿಲನ್ನು ತಟ್ಟಿದ್ದಾರೆ.
ಅಲ್ಲದೆ, ಇಂದು ನಡೆದ ಕಾರ್ಯಕ್ರಮದಲ್ಲಿ ರಘುಪತಿ ಬಿಜೆಪಿಗೆ ಸೇರ್ಪಡೆಗೊಂಡರೆ, ಇತ್ತ ಹೊಟೇಲ್‌ನ ಹೊರಭಾಗದಲ್ಲಿ ವೈಜನಾಥ್ ಕಾಣಿಸಿಕೊಂಡಿದ್ದು, ವದಂತಿಗೆ ಇಂಬು ನೀಡಿದಂತಾಗಿದೆ. ಬಿಜೆಪಿ ಮೂಲದ ಪ್ರಕಾರ ಇನ್ನೆರಡು ದಿನಗಳಲ್ಲಿ ವೈಜನಾಥ್ ಪಕ್ಷ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿವೆ.
|