ರಾಜ್ಯದ 11 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ ಶನಿವಾರದಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಗುರುವಾರ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.
ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ಚುರುಕುಗೊಳಿಸಿದ್ದು, ಕೊನೆಯ ಕ್ಷಣದಲ್ಲಿ ಮತದಾರನ ಮನವೊಲಿಸಲು ಎಲ್ಲ ಪಕ್ಷಗಳು ಭಾರಿ ಪೈಪೋಟಿ ನಡೆಸಿದವು. ಕೊನೆಯ ಸುತ್ತಿನ ಪ್ರಚಾರದ ಭರಾಟೆಯಲ್ಲಿ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳು ಮೊದಲ ಹಂತದ ಚುನಾವಣೆಯಲ್ಲಿ ಒಳಗೊಂಡಿವೆ.
ಮುಂಬರುವ ಲೋಕಸಭಾ ಚುನಾವಣೆಗೆ ಈ ಚುನಾವಣಾ ಫಲಿತಾಂಶ ಪ್ರತಿಕೂಲ ಪರಿಣಾಮ ಬೀರುವುದರಿಂದ ಈ ಬಾರಿಯ ಚುನಾವಣೆಗೆ ಹೆಚ್ಚಿನ ಮಹತ್ವ ಬಂದಿದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ನಿಶ್ಚಲ ಬಹುಮತ ದೊರೆಯದ ಕಾರಣ, ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರಕ್ಕೆ ಮೊರೆಹೋಗಬೇಕಾಯಿತು. ಆದರೆ ಅದು ಯಶಸ್ಸು ಕಂಡಿಲ್ಲ. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ.
|