ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ರಾಜ್ಯ ಮುಂದೆ ಬರೆಬೇಕಾದರೆ ಸ್ಥಿರ ಸರ್ಕಾರದ ಅಗತ್ಯವಿದೆ ಎಂದು ತಿಳಿಸಿದ ಪ್ರಧಾನಿ ಮನಮೋಹನ್ ಸಿಂಗ್, ಭವಿಷ್ಯದ ಕರ್ನಾಟಕ ರೂಪಿಸಲು ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಪ್ರಮಾಣ ಕಡಿಮೆಯಾಗಿದೆ. ಹಳೆ ವೈಭವವನ್ನು ಮರುಕಳಿಸಲು ಹಾಗೂ ಸ್ಥಿರ ಸರ್ಕಾರ ರಚಿಸಲು ಕಾಂಗ್ರೆಸ್‌ನ್ನು ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ತಿಳಿಸಿದರು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಎರಡೂ ಪಕ್ಷಗಳು ಕೇವಲ ಆರೋಪ-ಪ್ರತ್ಯಾರೋಪಗಳ ಮೂಲಕ ಅಧಿಕಾರಕ್ಕಾಗಿ ಕಚ್ಚಾಟ ನಡೆಸಿ ಕಾಲ ಕಳೆದಿದ್ದರಿಂದ ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಹಿಂದಿನ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಾಧನೆಯನ್ನು ಕೊಂಡಾಡಿದ ಅವರು, ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ಹೊಳೆಯುತ್ತಿತ್ತು. ನಗರದಲ್ಲಿ ಐಟಿ ಬಿಟಿಯಲ್ಲಿನ ಆದ ಮಹತ್ವದ ಬದಲಾವಣೆ ದೇಶಕ್ಕೆ ಮಾದರಿಯಾಗಿತ್ತು ಎಂದು ವಿವರಿಸಿದರು.
ಸಾಮಾಜಿಕ ನ್ಯಾಯದ ಪ್ರತೀಕವಾಗಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು.
|