ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಹಣಕ್ಕಾಗಿ ವಿಧಾನಸಭಾ ಸೀಟುಗಳನ್ನು ಮಾರಿಕೊಂಡಿವೆ ಎಂದು ಬಿಎಸ್ಪಿ ನಾಯಕ ಹೆಚ್.ಎನ್. ನಂಜೇಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಇಂದು(ಗುರುವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ನೀಡಿ ಸೀಟು ಪಡೆದುಕೊಂಡಿರುವ ಅಭ್ಯರ್ಥಿಗಳಿಗೆ ಆ ಕ್ಷೇತ್ರಗಳ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಬೆಂಗಳೂರು ಒಂದರಲ್ಲೇ ಅರ್ಧದಷ್ಟು ಸೀಟುಗಳು ಪೇಮೆಂಟ್ ಸೀಟುಗಳಾಗಿವೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪ್ರತಿಯೋಬ್ಬ ಅಭ್ಯರ್ಥಿಯು ಸುಮಾರು 10ಕೋಟಿ ಹಣ ಪಡೆದು ಸೀಟು ಗಿಟ್ಟಿಸಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಈ ಮೂಲಕ ವಿಧಾನಸಭೆಗೆ ಆಯ್ಕೆಯಾಗಿ ಹಣ ಮಾಡುವುದು ಅವರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಟೀಕಿಸಿದರು.
ಇದೇ ಸಂದರ್ಭದಲ್ಲಿ ಆಯೋಗದ ವಿರುದ್ಧ ಕಿಡಿ ಕಾರಿದ ಅವರು, ಮಾಯಾವತಿ ಪ್ರಚಾರ ಕೈಗೊಂಡ ವೇಳೆ ಅವರ ಭದ್ರತೆಗಾಗಿ ಬಂದಿದ್ದ ವಾಹನಗಳನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಸೋನಿಯಾ ಗಾಂಧಿ ಭದ್ರತಾ ವಾಹನಗಳನ್ನೇಕೆ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗದ ತಾರತಮ್ಯ ನೋಡಿದರೆ ಆಯೋಗ ಕಾಂಗ್ರೆಸ್ ಪರವಾಗಿ ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ. ಇದರ ಬಗ್ಗೆ ಆಯೋಗಕ್ಕೆ ದೂರು ನೀಡುವುದಾಗಿ ಅವರು ತಿಳಿಸಿದರು.
|