ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಬರುವುದರ ಜೊತೆಗೆ ಜೆಡಿಎಸ್ ಅಧಿಕಾರದ ಗದ್ದುಗೆ ಏರಲಿದೆ ಎಂದ ಮಾಜಿ ಮುಖ್ಯಮಂತ್ರಿ ಎಚ್.ಕುಮಾರಸ್ವಾಮಿ, ಈ ಬಾರಿಯೂ ನಾನೇ ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಘೋಷಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯಾದ್ದರಿಂದ ಮಾಗಡಿ ಕ್ಷೇತ್ರದ ಅಭ್ಯರ್ಥಿ ಪರ ಕೇತಗಾನ ಹಳ್ಳಿಯಲ್ಲಿ ಮತಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ಪಕ್ಷನಿಷ್ಠವಾಗಿ ಸಮೀಕ್ಷೆ ನಡೆಸಿವೆ. ಇವು ಕಾಂಗ್ರೆಸ್, ಬಿಜೆಪಿಗೆ ಹೆಚ್ಚು ಸೀಟು ಬಂದು ಜೆಡಿಎಸ್‌ಗೆ15-18 ಸೀಟುಗಳು ದೊರಕುತ್ತದೆ ಎಂದಿವೆ. ಇವೆಲ್ಲವೂ ಒಂದೊಂದು ಪಕ್ಷದ ಪರವಾಗಿದೆ. ಆದರೆ ನಮಗೆ ವಿಶ್ವಾಸವಿದೆ. ರಾಜ್ಯದಲ್ಲಿ ಪ್ರವಾಸ ಮಾಡಿದ ನಾನು ಜೆಡಿಎಸ್‌ನ ಪ್ರಬಲ ಅಲೆಯನ್ನು ಕಂಡಿದ್ದೇನೆ ಎಂದರು.
ಬಿಜೆಪಿ, ಕಾಂಗ್ರೆಸ್ ಪಕ್ಷದ ರಾಷ್ಟ್ರಮಟ್ಟದ ಧುರೀಣರು, ಸಿನಿಮಾ ಸ್ಟಾರ್ಗಳು ಬಂದು ಪ್ರಚಾರ ಮಾಡಿದ್ದಾರೆ ಇದರಿಂದ ನೀವು ಹಾಗೂ ದೇವೇಗೌಡರು ಧೃತಿಗೆಟ್ಟಿಲ್ಲವೇ ಎಂಬ ಪ್ರಶ್ನೆಗೆ, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಜನರಿಗಾಗಿರುವ ಪಕ್ಷ. ಬೇರೆ ಪಕ್ಷಗಳ ಸ್ಟಾರ್ ಪ್ರಚಾರ ಯಾವುದೇ ಪ್ರಭಾವ ಬೀರುವುದಿಲ್ಲ. ದೇವೇಗೌಡರು ಕೂಡಾ ಪಕ್ಷ ಬಹುಮತ ಗಳಿಸುವ ವಿಶ್ವಾವಿದೆ ಹೊಂದಿದ್ದಾರೆ. ಈ ಬಾರಿಯು ಜೆಡಿಎಸ್ ಆಡಳಿತರೂಢ ಪಕ್ಷವಾಗಲಿದ್ದು, ನಾನು ಮುಖ್ಯಮಂತ್ರಿಯಾಗಲಿದ್ದೇನೆ ಎಂದರು.
ಕಾಂಗ್ರೆಸ್ಸಿಗರು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ನನ್ನನ್ನು ಜನ ಮೆಚ್ಚಿದ್ದಾರೆ. ಅವರೇ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
|