ಚುನಾವಣೆ ಆರಂಭವಾಗಿದೆ. ಜೊತೆ ಜೊತೆಗೆ ಅಕ್ರಮ, ಆಮಿಷಗಳು ಕೂಡಾ ಆರಂಭವಾಗಿದೆ. ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ಮತದಾನಕ್ಕೆ ಬರುವ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ರಾಜಕೀಯ ಪಕ್ಷವೊಂದು ಚುನಾವಣೆ ನಂತರ ಟಿವಿ ಪಡೆಯಲು ಮತದಾರರಿಗೆ ಟೋಕನ್ ಹಂಚಿದೆ. ಕಾರ್ಯಕರ್ತರು ಮತದಾರರ ಮನೆಮನೆಗೆ ಹೋಗಿ ಈ ಟೋಕನ್ ವಿತರಿಸಿದ್ದಾರೆ. ಟೋಕನ್‌ನಲ್ಲಿ ಹೊರೆಹೊತ್ತ ಮಹಿಳೆಯ ಚಿಹ್ನೆ ಇದೆ ಎನ್ನಲಾಗಿದೆ.ಮತದಾನ ಮಾಡಿ ಬರುತ್ತಿರುವ ಮತದಾರರಿಗೆ ಈ ರೀತಿಯ ಆಮಿಷ ಒಡಿದ್ದಾರೆ.
ಲಘು ಲಾಠಿ ಪ್ರಹಾರ: ಚಿಕ್ಕಪೇಟೆಯ ಸೋಮೆಶ್ವರದಲ್ಲಿ ಮತದಾರರ ಪಟ್ಟಿಯಲ್ಲಿನ ಗೊಂದಲದಲ್ಲಿನ ಬಗ್ಗೆ ಮೂರು ಪಕ್ಷಗಳ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ಸಂಘರ್ಷದತ್ತ ತೆರಳುತ್ತಿದ್ದಂತೆ ಪೊಲೀಸರು ಕಾರ್ಯಕರ್ತರನ್ನು ಚದರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಮತ್ತೊಂದು ಘಟನೆಯಲ್ಲಿ ನಕಲಿ ಗುರುತಿನ ಚೀಟಿ ಬಳಸಿ ಮತಚಲಾಯಿಸಲು ಯತ್ನಿಸಿದ 20 ಮಂದಿಯನ್ನು ಬಂಧಿಸಲಾಗಿದೆ. ಇವರು ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಪರ ಮತಚಲಾಯಿಸಲು ಆಂಧ್ರದಿಂದ ಬಂದಿದ್ದಾರೆ ಎನ್ನಲಾಗಿದೆ. ಸರತಿಯಲ್ಲಿ ನಿಂತಿದ್ದ ಇವರ ಬಗ್ಗೆ ಸಂಶಯಗೊಂಡು ವಿಚಾರಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.ಬೆಂಗಳೂರಿನ ಗಂಗಾನಗರದ ಭಾರತಿ ಮಂದಿರದ ಬಳಿ ನಕಲಿ ಮತದಾನಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ಕೆಲ ಕಾಲ ಮತದಾನ ಸ್ಥಗಿತವಾಗಿದೆ.
ಶುಕ್ರವಾರ ರಾತ್ರಿ ರಾಜಕೀಯ ಪಕ್ಷವೊಂದು ವಿತರಿಸಿದ ನಕಲಿ ಮದ್ಯ ಕುಡಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಅರಕಲಗೂಡಿನ ನೇರಳೆ ಗ್ರಾಮದ ವ್ಯಕ್ತಿ ಈ ರೀತಿ ಸಾವೀಗೀಡಾಗಿದ್ದಾರೆ.ಈ ವರೆಗೆ ಶೆ. 15 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
|