ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
953 ಅಭ್ಯರ್ಥಿಗಳ ಭವಿಷ್ಯ ದಾಖಲು
ರಾಜ್ಯ ವಿಧಾನಸಭೆಗೆ ನಡೆದ ಮೊದಲ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ನಡೆದ 89 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ದೃಷ್ಟಿಯಿಂದ ಅತಿ ಮುಖ್ಯವೆನಿಸಿದೆ. ಬೆಂಗಳೂರು ಮರುವಿಂಗಡಣೆ ನಂತರ 28 ಸ್ಥಾನಗಳು ಸೇರಿದಂತೆ 953 ಅಭ್ಯರ್ಥಿಗಳು ಪಡೆದ ಮತಗಳು ಮತಯಂತ್ರದಲ್ಲಿ ಶೇಖರಣೆಯಾಗಿವೆ.

ಬೆಂಗಳೂರು ಗ್ರಾಮಾಂತರದಲ್ಲಿ ಅತಿಹೆಚ್ಚು ಅಂದರೆ ಶೇಕಡಾ 72.5ರಷ್ಟು ಮತದಾನವಾಗಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 44ರಷ್ಟು ಮತದಾನವಾಗಿದೆ.

ಬೆಳಗ್ಗೆ ಮತದಾನದ ಪ್ರಮಾಣ ತೀರಾ ಕಡಿಮೆಯಿದ್ದು ಮಧ್ಯಾನ್ಹದ ನಂತರ ಶೇಕಡಾವಾರು ಹೆಚ್ಚಳವಾಯಿತು. ಹಳೇ ಮೈಸೂರು ಭಾಗದ ಗ್ರಾಮೀಣ ಪ್ರದೇಶದಲ್ಲಿ ಜನ ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹದಿಂದ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಸ ಮತದಾನವಾಗಿದ್ದು, ಮತದಾನ ಮಾಡಲು ಉತ್ಸಾಹ ತೋರಿದ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದುದರಿಂದ ಮತದಾನದ ಪ್ರಮಾಣ ಮತ್ತಷ್ಟು ಕಡಿಮೆಯಾಗಲು ಕಾರಣವೆನ್ನಬಹುದು. ಬೆಂಗಳೂರಿನ ಹೆಬ್ಬಾಳ, ಪದ್ಮನಾಭನಗರ, ರಾಜಾಜಿ ನಗರ ಮುಂತಾದ ಕಡೆಗಳಲ್ಲಿ ಮತದಾನ ಮಾಡಲು ಹಂಬಲಿಸಿದವರ ಹೆಸರುಗಳು ಮತಪಟ್ಟಿಯಲ್ಲಿ ಕಾಣದೆ ನಾಗರಿಕರ ಆಕ್ರೋಶಕ್ಕೆ ಗುರಿಯಾಯಿತು. ಇದರ ನಡುವೆ ಪದೇ ಪದೇ ಕೈಗೊಡುತ್ತಿದ್ದ ಮತಯಂತ್ರಗಳ ಕಾಟ ಬೇರೆ. ತಾಳ್ಮೆ ಕಳೆದುಕೊಂಡ ನಾಗರಿಕರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಿಯಂತ್ರಿಸಲು ಹಲವೆಡೆ ಲಘು ಲಾಠಿ ಪ್ರಹಾರ ಕೂಡ ನಡೆಯಿತು. ಚುನಾವಣಾ ಆಯೋಗ ತರಾತುರಿಯಲ್ಲಿ ಮತದಾರರ ಪಟ್ಟಿ ತಯಾರಿಸಿದ್ದು ಈ ಎಲ್ಲ ಘಟನೆಗಳಿಗೆ ಕಾರಣ ಎಂದು ಕಾಂಗ್ರೆಸ್ ನಾಯಕರು ದೂರುತ್ತಿದ್ದುದು ಕಂಡು ಬಂತು.

ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಹಲವು ಕಡೆ ನಕಲಿ ಮತದಾನ ಮಾಡಲು ಪ್ರಯತ್ನಪಟ್ಟಿದ್ದು, ಬಿಜೆಪಿ ಪರವಾಗಿ ಮತಚಲಾಯಿಸಲು ಬಂದಿದ್ದರೆನ್ನಲಾದ ಆಂಧ್ರ ಮೂಲಕ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಜಿದ್ದಾಜಿದ್ದಿಬಸವನ ಗುಡಿಯಲ್ಲಿ ಸುಮಾರು 40 ಸಾವಿರ ಮತದಾರರ ಹೆಸರು ಕೈಬಿಟ್ಟು ಹೋಗಿದೆ. ಆದ್ದರಿಂದ ಪಟ್ಟಿಪರಿಷ್ಕರಣೆ ಮಾಡಿ ಮರುಚುನಾವಣೆ ನಡೆಸಬೇಕೆಂದು ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎಚ್.ಎಂ. ವಿಶ್ವನಾಥ್ ಒತ್ತಾಯಿಸಿದರೆ, ಸ್ಥಳದಲ್ಲೆ ಇದ್ದ ಹೆಸರು ಬಿಟ್ಟಹೋದ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಹಂತದ ಚುನಾವಣೆ ನಡೆದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಕೋಲಾರ ಜಿಲ್ಲೆಗಳಲ್ಲಿ ಸಣ್ಣಪುಟ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು. ಬಹುಮುಖ್ಯವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಣವಾದ ಹಳೇ ಮೈಸೂರು ಭಾಗದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಬೆಂಗಳೂರು ನಗರ ಪ್ರದೇಶದಲ್ಲಿ ಅರೆಮಿಲಿಟರಿ ಪಡೆಯ ಯೋಧರನ್ನು ಚುನಾವಣಾ ಭದ್ರತೆಗೆ ನಿಯೋಜಿಸಲಾಗಿತ್ತು.

ಕೆಲವು ಕಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದರೆ, ಬೆಂಗಳೂರಿನ ಕೆಲವು ಕಡೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿವೆ. ಚುನಾವಣಾ ಆಯೋಗದ ಬಿಗಿ ನಿಲುವಿನಿಂದ ಈ ಬಾರಿ ಚುನಾವಣಾ ರಣೋತ್ಸಾಹ ಕಡಿಮೆಯಾಗಿತ್ತು ಎನ್ನಬಹುದು. ರಾಜಕೀಯ ಪಕ್ಷವೊಂದರ ಕಾರ್ಯಕರ್ತರ ಪ್ರಕಾರ `ಯಾವುದೇ ಬ್ಯಾನರ್, ಬಂಟಿಂಗ್ಸ್‌ಗಳಿಲ್ಲದ, ಪ್ರಚಾರದಲ್ಲಿ ಅಬ್ಬರವಿಲ್ಲದ ಈ ಚುನಾವಣೆ ವಿಭಿನ್ನವಾತ ವಾತವರಣ ನಿರ್ಮಿಸಿದ್ದು ಕೆಲವು ಜನರನ್ನು ಮತಗಟ್ಟಗೆ ಕರೆತರುವಲ್ಲಿ ಯಶಸ್ವಿಯಾಗಿಲ್ಲ.

ಜೆಡಿಎಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ನಡೆದ ಈ ಚುನಾವಣೆ ಬಹಳ ಮಹತ್ವವೆನಿಸಿತ್ತು. ಜೆಡಿಎಸ್ ಕೋಟೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಲಗ್ಗೆ ಹಾಕಿದ್ದು, ಜೆಡಿಎಸ್ ಕೋಟೆ ಛಿದ್ರವಾಗುವುದೇ ಅಥವಾ ಭದ್ರವಾಗಿರುವುದೇ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಹಾಸನದ ಅರಕಲಗೂಡು ತಾಲೂಕಿನಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಘರ್ಷಣೆ ನಡೆದಿದ್ದು ನಂತರ ತಹಬಂದಿಗೆ ಬಂದಿದೆ. ಕೋಲಾರದ ಶ್ರೀನಿವಾಸಪುರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಮಹಿಳೆಯರಿಗೆ ಗಾಯವಾದ ವಿಷಯದಲ್ಲಿ ನಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ ದುರ್ಬಲವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಸ್ಪರ್ಧೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಇದರ ನಡುವೆ ಬಿಎಸ್ಪಿ ಮತ ಹೆಚ್ಚಿಸಿಕೊಂಡಿದ್ದು, ಕಾಂಗ್ರೆಸ್ ಗೆಲ್ಲುವ ಕ್ಷೆತ್ರಗಳ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಅಂದಾಜು ನಡೆದಿದೆ. ಒಟ್ಟಾರೆ ಮತದಾನ ಶಾಂತಿಯುತವಾಗಿದ್ದು 2ನೇ ಮತ್ತು 3ನೇ ಹಂತದ ಚುನಾವಣೆ ಮೇಲೆ ಇದರ ಪರಿಣಾಮ ಖಂಡಿತ ಆಗುವ ಸಾಧ್ಯತೆ ಇದೆ.

ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಮತ್ತು ಅವರ ಪತ್ನಿ, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಮೈಸೂರಿನಲ್ಲಿ ಸುತ್ತೂರು ಸ್ವಾಮಿಗಳು, ಗಣಪತಿ ಸಚ್ಚಿದಾನಂದ ಸ್ವಾಮಿ, ಹೊಳೆನರಸಿಪುರದಲ್ಲಿ ದೇವೆಗೌಡ, ರೇವಣ್ಣ ಕುಟುಂಬ ಸಮೇತ, ಸೋಮನಹಳ್ಳಿಯಲ್ಲಿ ಎಸ್.ಎಂ. ಕೃಷ್ಣ ಹಾಗೂ ದೊಡ್ಡಆಲದಹಳ್ಳಿ ಗ್ರಾಮದಲ್ಲಿ ಡಿ.ಕೆ. ಶಿವಕುಮಾರ್ ಪತ್ನಿ ಸಮೇತರಾಗಿ ಮತ ಚಲಾಯಿಸಿದರು.

ತುಮಕೂರಿನಲ್ಲಿ ಜನ ಮತದಾನಕ್ಕೆ ಬಾರದೆ ಮನೆಯಲ್ಲಿ ಟಿವಿ ನೊಡುತ್ತಿದ್ದಾರೆ ಎಂದು ತಿಳಿದ ಅಭ್ಯರ್ಥಿಗಳು ಕೆಲ ಸಮಯ ಕೇಬಲ್ ಪ್ರಸಾರ ಸ್ಥಗಿತಗೊಳಿಸಿದ ಘಟನೆಯೂ ನಡೆಯಿತು. ಮೊದಲ ಹಂತದ ಚುನಾವನೆಯಲ್ಲಿ ಘಟಾನುಘಟಿಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ, ಅಂಬರಿಷ್, ರೇವಣ್ಣ, ಬೆಂಗಳೂರಿನಲ್ಲಿ ಕೃಷ್ಣ ಭೈರೇಗೌಡ, ನಾರಾಯಣಸ್ವಾಮಿ, ಆರ್. ಅಶೋಕ್ ರೋಷನ್ ಬೇಗ್, ರಾಮಲಿಂಗಾರೆಡ್ಡಿ ಮುಂತಾದವರ ಭವಿಷ್ಯ ಮತಪೆಟ್ಟಿಗೆಯಲ್ಲಿ ದಾಖಲಾಗಿದೆ.

89 ಕ್ಷೇತ್ರಗಳ ಕ್ಷೇತ್ರವಾರು ಮತದಾನ
ಬಿಬಿಎಂಪಿ ಶೇ. 44
ತುಮಕೂರು ಶೇ. 63
ಬೆ. ಗ್ರಾ. ಶೇ. 72.5
ಬೆ. ನ. ಶೇ. 55
ರಾಮನಗರ ಶೇ. 70
ಕೋಲಾರ ಶೇ. 64
ಮಂಡ್ಯ ಶೇ. 68
ಹಾಸನ ಶೇ. 68
ಮೈಸೂರು ಶೇ. 54
ಚಾ.ನ. ಶೇ. 65
ಕೊಡಗು ಶೇ. 60
ಚಿಕ್ಕಬಳ್ಳಾಪುರ ಶೇ. 68
ರಾಮನಗರ ಶೇ. 66

> ಒಟ್ಟಾರೆ ಶೇ. 59.8 ಮತದಾನ
> ನಗರ ಪ್ರದೇಶದಲ್ಲಿ ನೀರಸ ಮತದಾನ
> ಗ್ರಾಮೀಣ ಭಾಗದಲ್ಲಿ ಉತ್ಸಾಹ
> ಬೆಂಗಳುರು ಗ್ರಾಮಾಂತರ ಅಧಿಕ(72.5ಅ) > ಬಿಬಿಎಂಪಿ ಕನಿಷ್ಠ(48ಅ)
> ನಕಲಿ ಮತಚಲಾಯಿಸುತ್ತಿದ್ದ ಆಂಧ್ರ ಮೂಲದವರ ಬಂಧನ- ಪೊಲೀಸ್ ಠಾಣೆಗೆ ದೌಡಾಯಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
> ಕೆಲವು ಕಡೆ ಬಲಗೈ ಬೆರಳಿಗೆ ಶಾಹಿ: ನಕಲಿ ಮತದಾನಕ್ಕೆ ಪ್ರೇರೇಪಣೆ?
ಮತ್ತಷ್ಟು
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಈ ಬಾರಿಯೂ ನಾನೇ ಮುಖ್ಯಮಂತ್ರಿ: ಕುಮಾರಸ್ವಾಮಿ
ಶೆ 12 ರಷ್ಟು ಮತದಾನ, ಮತಯಂತ್ರಗಳ ಸಮಸ್ಯೆ
ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಕಲಿ ಮೂಗುತಿ ಆಮಿಷ
89 ಕ್ಷೇತ್ರಗಳಿಗೆ 953 ಅಭ್ಯರ್ಥಿಗಳು: ಮತದಾನ ಆರಂಭ
ನಿರ್ಭೀತಿಯಿಂದ ಮತ ಚಲಾಯಿಸಿ: ಅಚ್ಯುತರಾವ್