ನಗರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಸಂಭವಿಸಿರುವ ಬಾಂಬ್ ಸ್ಪೋಟಕ್ಕೆ ಲಷ್ಕರ್ ಹಾಗೂ ಸಿಮಿ ಸಂಘಟನೆಯ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಆಯುಕ್ತ ನಾರಾಯಣ ನಡುಮನಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಬಾಂಬ್ ಸ್ಪೋಟದ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗುವುದು ಎಂದು ತಿಳಿಸಿದರು.
ಸ್ಥಳಕ್ಕೆ ಈಗಾಗಲೇ ರಾಷ್ಟ್ತ್ರೀಯ ಭದ್ರತಾ ಅಧಿಕಾರಿಗಳ ತಂಡ ಆಗಮಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ನಾಗರಿಕರು ಪ್ರತಿಭಟನೆಗೆ ಇಳಿದಿದ್ದಾರೆ.
ಕಳೆದ ಕೆಲವು ತಿಂಗಳಿಂದ ಈ ನ್ಯಾಯಾಲಯದಲ್ಲಿ ಶಂಕಿತ ಭಯೋತ್ಪಾದಕರ ವಿಚಾರಣೆ ನಡೆಸಲಾಗಿತ್ತು. ಅಲ್ಲದೆ, ಸೋಮವಾರದಂದು ಶಂಕಿತ ಉಗ್ರರನ್ನು ನ್ಯಾಯಾಲಯಕ್ಕೆ ಕರೆತರಬೇಕಿತ್ತು. ಆದರೆ ಅದಕ್ಕೂ ಎರಡು ದಿನ ಮೊದಲೇ ಸ್ಪೋಟ ಸಂಭವಿಸಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆಯೇ ಹುಬ್ಬಳ್ಳಿ ನ್ಯಾಯಾಲಯಕ್ಕೆ ಬೆದರಿಕೆ ಪತ್ರಗಳು ಬಂದಿದ್ದವು. ಈ ನಿಟ್ಟಿನಲ್ಲಿ ನ್ಯಾಯಾಧೀಶರು ನ್ಯಾಯಾಲಯಕ್ಕೆ ರಕ್ಷಣೆ ನೀಡಬೇಕೆಂದು ಪೊಲೀಸ್ ಇಲಾಖೆಗೆ ಎರಡು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಪೊಲೀಸ್ ಇಲಾಖೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಆದರೆ ಈಗ ಬಾಂಬ್ ಸ್ಪೋಟದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದು, ನಗರ ಪ್ರವೇಶಿಸಿರುವ ಹಾಗೂ ಹೊರಹೋಗುವವರನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ.
|