ರಾಜ್ ಪುತ್ಥಳಿ ವಿರೂಪ ಕನ್ನಡ ಸಂಘಟನೆಗಳ ಪ್ರತಿಭಟನೆಮೇರುನಟ ಡಾ. ರಾಜ್‌ಕುಮಾರ್ ಪುತ್ಥಳಿ ವಿರೂಪಗೊಳಿಸಿದ ಘಟನೆಯನ್ನು ಖಂಡಿಸಿ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇಂದು (ಸೋಮವಾರ) ನಾಯಂಡನಹಳ್ಳಿ ಹಾಗೂ ಪಂತರಪಾಳ್ಯದಲ್ಲಿ ರಸ್ತೆ ತಡೆ ನಡೆಸಿದರು.
ಇಂದು ಬೆಳಿಗ್ಗೆಯಿಂದಲೇ ಈ ಪ್ರದೇಶದ ಕೆಲವು ಕಡೆ ಅಂಗಡಿಗಳನ್ನು ಮುಚ್ಚಲಾಗಿತ್ತು. ಸ್ಥಳೀಯ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಘಟನೆಯನ್ನು ಕಟುವಾಗಿ ಖಂಡಿಸಿದ್ದು, ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್ ಕೂಡ ಧರಣಿ ನಿರತರೊಂದಿಗೆ ಸೇರಿ ಈ ಘಟನೆಯನ್ನು ಖಂಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಂತಿ ಕಾಪಾಡಿ ಎಂಬ ರಾಜ್‌ಕುಮಾರ್ ಅವರ ಆದರ್ಶ ಪಾಲಿಸಬೇಕು. ಹೋರಾಟ, ಹಿಂಸಾರೂಪ ಬೇಡ ಎಂದು ರಾಜ್ ಅಭಿಮಾನಿಗಳಿಗೆ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ನಾಯಂಡನಹಳ್ಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಇದರಿಂದ ಸಂಚಾರಕ್ಕೆ ಕೆಲಹೊತ್ತು ಅಡಚಣೆಯುಂಟಾಯಿತು.
|