ಬೆಂಗಳೂರು: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಜಾತ್ಯತೀತ ಶಕ್ತಿಗಳು ಒಟ್ಟಾಗಿ ಎಸ್. ಬಂಗಾರಪ್ಪ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ. ಎಸ್. ಯಡಿಯೂರಪ್ಪ ಸೋಲುವುದು ನಿಶ್ಚಿತ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಕ್ಷಕ್ಕೆ ರಾಜ್ಯದಲ್ಲಿ ಭದ್ರ ನೆಲೆ ಇಲ್ಲವಾದರೂ, ಬಂಗಾರಪ್ಪ ತಮ್ಮ ಸ್ವಂತ ವರ್ಚಸ್ಸಿನಿಂದ ಗೆಲ್ಲಲಿದ್ದಾರೆ. ಜತೆಗೆ, ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳು ಬಂಗಾರಪ್ಪ ಅವರ ಬೆಂಬಲಕ್ಕೆ ನಿಂತಿರುವುದು ಅವರ ಗೆಲುವನ್ನು ನಿರಾಯಾಸಗೊಳಿಸಿದೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಮುಖಭಂಗವಾಗುವುದು ಖಚಿತ ಎಂದು ತಿಳಿಸಿದರು.
ರಾಜ್ಯದ ಪ್ರಭಾವಿ ನಾಯಕರಾದ ಬಂಗಾರಪ್ಪ ಅವರು ನಾಲ್ಕು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಲಿದ್ದಾರೆ. ಯಡಿಯೂರಪ್ಪ ವಿರುದ್ಧ ಬಂಗಾರಪ್ಪ ಅವರ ಗೆಲುವು ತಮ್ಮ ಪಕ್ಷದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ಅಮರ್ ಸಿಂಗ್ ತಿಳಿಸಿದರು.
ಚುನಾವಣೆಗೆ ಉಳಿದ ಪಕ್ಷಗಳಂತೆ ತಮ್ಮ ಪಕ್ಷ ಸಂಪನ್ಮೂಲಗಳನ್ನೇನು ರವಾನಿಸಿಲ್ಲ. ಆದರೆ, ಸಮಾಜವಾದಿ ಪಕ್ಷವು ನೈತಿಕತೆ ಹಾಗೂ ತತ್ವಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದೆ ಎಂದು ಅವರು ತಿಳಿಸಿದರು.
|