ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ 135 ಸ್ಥಾನ ಗಳಿಸುವ ಮೂಲಕ ಅಧಿಕಾರಕ್ಕೇರಲಿದೆ. ಕಾಂಗ್ರೆಸ್ಸಿಗೇ ಬಹುಮತ ಬರಬಹುದು ಎಂಬುದಕ್ಕೆ ನನ್ನಲ್ಲಿ ನಾಲ್ಕು ಸಮೀಕ್ಷಾ ವರದಿಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಘೋಷಿಸಿದ್ದಾರೆ.
ಪ್ರಥಮ ಹಂತದ ಚುನಾವಣೆಯಲ್ಲಿ ಪ್ರಕಟವಾದ ಸಮೀಕ್ಷೆಗಳನ್ನು ತಾನು ನಂಬುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ಗೆ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ಸಿನ ವರ್ಚಸ್ಸು ಪ್ರಚಾರದ ವೇಳೆ ಬಿಂಬಿತವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆದ ಕಾರಣ ಪಕ್ಷಕ್ಕೆ ಸೋಲುಂಟಾಯಿತು. ಆದರೆ ಈ ಬಾರಿ ಹಾಗಾಗುವುದಿಲ್ಲ ಎಂದು ತಿಳಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಕಬಳಿಸಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಸಮೀಕ್ಷೆಯನ್ನು ಟೀಕಿಸಿದ ಅವರು, ಇಂತಹ ಸಮೀಕ್ಷೆಗಳಿಗೆ ಯಾವುದೇ ಆಧಾರವಿಲ್ಲ. ಕಾಂಗ್ರೆಸಿಗೆ ಬಹುಮತ ಬರುವುದೆಂಬುದಕ್ಕೆ ತಮ್ಮಲ್ಲಿ ನಾಲ್ಕು ಸಮೀಕ್ಷಾ ವರದಿಗಳಿವೆ ಎಂದರು.
ಮೊಯಿಲಿ ಹೊಸರಾಗ : ಇತ್ತೀಚೆಗಷ್ಟೆ ಸಾರಾಯಿ ಜಾರಿಗೆ ತರಲು ಕಾಂಗ್ರೆಸ್ ಸಿದ್ಧ ಎಂದು ಹೇಳಿದ್ದ ಮೊಯಿಲಿ ಈಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ. ಸಾರಾಯಿಯನ್ನು ಜಾರಿಗೆ ತರುತ್ತೇವೆಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಯೇ ಇಲ್ಲ. ಮದ್ಯಪಾನ ವಿಮೋಚನೆಯೇ ತಮ್ಮ ಪಕ್ಷದ ಪ್ರಮುಖ ಗುರಿ ಎಂದು ಹೇಳಿದ್ದಾರೆ.
|