ಮೂರನೇ ಹಂತದ ಚುನಾವಣೆಗೆ ಮೂರು ದಿನ ಬಾಕಿ ಇರುವಂತೆ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿದೆ.
ಬಿಜಾಪುರದ ಸಿಂದಗಿಯಲ್ಲಿ ಬಹಿರಂಗ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯಕ ಎಲ್. ಕೆ. ಅಡ್ವಾಣಿ, ಜೆಡಿಎಸ್‌ನ ವಚನ ಭ್ರಷ್ಟತೆ ಹಾಗೂ ಕಾಂಗ್ರೆಸ್ ಹಣದುಬ್ಬರದಿಂದ ಜನತೆ ಬೇಸರಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜಾಪುರದಲ್ಲಿ ಪ್ರಚಾರ ಭಾಷಣ ಮಾಡಿದ ಬಳಿಕ ಅಡ್ವಾಣಿ ಹುಬ್ಬಳ್ಳಿಗೆ ತೆರಳಿದರು. ಇತ್ತ ರೋಣದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ನರೇಂದ್ರ ಮೋದಿ ಆಗಮಿಸಿದ್ದಾರೆ. ಈ ಮಧ್ಯೆ ಗುಲ್ಬರ್ಗಾದಲ್ಲಿ ಸಿಪಿಎಂ ಅಭ್ಯರ್ಥಿ ಪರ ಪ್ರಚಾರವನ್ನು ಕೈಗೊಂಡಿರುವ ಪೊಲಿಟ್ ಬ್ಯುರೋ ಸದಸ್ಯ ಸೀತಾರಂ ಯಚೂರಿ, ಕಾರ್ಮಿಕರ ಸಮಸ್ಯೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದಾಗಿ ಭರವಸೆ ನೀಡಿದರು.
ಸಮಾಜವಾದಿ ಪಕ್ಷದ ಅಭ್ಯರ್ಥಿ ಪರ ಪ್ರಚಾರವನ್ನು ನಡೆಸಲು ತಾರೆಯರಾದ ಜಯಪ್ರಧಾ ಹಾಗೂ ಜಯ ಬಚ್ಚನ್ ಇಂದು ಗುಲ್ಬರ್ಗಾಕ್ಕೆ ಆಗಮಿಸಲಿದ್ದಾರೆ. ಬಹುಜನ ಸಮಾಜ ಪಕ್ಷದ ಪರ ಮತಯಾಚಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಗುಲ್ಬರ್ಗಾದಲ್ಲಿ ಪ್ರಚಾರ ಕಾರ್ಯವನ್ನು ಮುಂದುವರೆಸಿದ್ದಾರೆ.
ಬೀದರ್‌ಗೆ ಇಂದು ಆಗಮಿಸಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ಬೀದರ್ ಹಾಗೂ ಜಮಖಂಡಿಯಲ್ಲಿ ಆಯೋಜಿಸಲಾಗಿರುವ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
|