ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ಕುಂದಾಪುರದ ಯುವಕ ನಯೀನ್ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಯೀನ್ ಕುಟುಂಬ, ಇಂದು ಬೆಳಿಗ್ಗೆ ದೂರವಾಣಿ ಮುಖಾಂತರ ಬಿಡುಗಡೆಗೊಂಡಿರುವ ಕುರಿತು ಮಾಹಿತಿ ಬಂದಿದ್ದು, ಇನ್ನೆರಡು ದಿನಗಳಲ್ಲಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಾಹಿತಿಯಿಂದ ಕುಂದಾಪುರದ ಗುರುಕಂಬಳದ ನಯೀನ್ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಯೀನ್ ತಂದೆ ಹುಸೇನ್, ಈ ಸುದ್ದಿ ತಮಗೆ ಸಂತಸ ತಂದಿದೆ. ಎಚ್ಬಿ ಕಂಪೆನಿಯವರ ಸಹಾಯದಿಂದ ಮಗನ ಬಿಡುಗಡೆ ಸಾಧ್ಯವಾಗಿದೆ. ಮಗನ ಬರುವಿಕೆಗಾಇ ಕಾದು ಕುಳಿತಿದ್ದೇವೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.
ನಯೀನ್ ಎಚ್‌ಬಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಏಪ್ರಿಲ್ 29ರಂದು ಈತನ ಅಪಹರಣವಾಗಿತ್ತು. ತಾಲಿಬಾನ್ ಭಯೋತ್ಪಾದಕ ಗುಂಪೊಂದು ಈ ಕೃತ್ಯ ಎಸಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಕೃತ್ಯವನ್ನು ಹಣಕ್ಕಾಗಿ ಸ್ಥಳೀಯರೇ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
|