ಉಗ್ರರಿಗೆ ತಲೆ ಬಾಗಿರುವ ಬಿಜೆಪಿ ಮುಖಂಡರಿಗೆ ಭಯೋತ್ಪದಕತೆ ಕುರಿತು ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಭಿವೃದ್ದಿ, ಉತ್ತಮ ಆಡಳಿತ ಹಾಗೂ ಸ್ಥಿರ ಸರ್ಕಾರದ ಬಗ್ಗೆ ಚಕಾರವೆತ್ತದ ಬಿಜೆಪಿ ಭಯೋತ್ಪಾದಕ ವಿಷಯವನ್ನು ಚುನಾವಣಾ ಪ್ರಚಾರವಾಗಿ ಬಳಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಭಯೋತ್ಪಾದಕರ ಬಗ್ಗೆ ಯುಪಿಎ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅಲ್ಲದೆ, ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ದಿಟ್ಟ ಹೆಜ್ಜೆ ಇರಿಸಿದೆ ಎಂದ ಅವರು, ಉಗ್ರರ ದಾಳಿಗೆ ಹಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ಕಳೆದುಕೊಂಡಿದ್ದರೂ, ಕಾಂಗ್ರೆಸ್ ಎಂದಿಗೂ ಉಗ್ರರಿಗೆ ತಲೆಬಾಗಿಲ್ಲ್ಲ ಎಂದು ತಿಳಿಸಿದರು.
ಬಿಜೆಪಿ ಮೇಲೆ ವಾಗ್ದಾಳಿ ಮುಂದುವರೆಸಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಂದರ್ಭದಲ್ಲಿ ಕಾಶ್ಮೀರ ಭಯೋತ್ಪಾದಕರ ತಾಣವಾಗಿತ್ತು. ಉಗ್ರರಿಗೆ ತಲೆಬಾಗಿದ ಬಿಜೆಪಿ ಕಂದಹಾರ್ ಅಪಹರಣ ವಿಚಾರದಲ್ಲಿ ಏನು ಮಾಡಿತು? ಎಂದು ಪ್ರಶ್ನಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಸ್ವಾರ್ಥ ಸಾಧನೆಗಾಗಿ ಮೈತ್ರಿ ಸರ್ಕಾರ ರಚಿಸಿದವು. ಇದರಿಂದ ರಾಜ್ಯ ಅಭಿವೃದ್ದಿಯನ್ನೇ ಕಾಣಲಿಲ್ಲ. ಈ ಕಾರಣಕ್ಕೆ ಚುನಾವಣೆ ರಾಜ್ಯಕ್ಕೆ ಅತಿ ಮಹತ್ವದ್ದಾಗಿದೆ. ಎಲ್ಲ ಸಮುದಾಯದ ಹಿತ ಹಾಗೂ ಎಲ್ಲ ಭಾಗಗಳ ಪ್ರಗತಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
|