ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಸಿದ್ದವಿರುವುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಹೈಕಮಾಂಡ್ ತಿಳಿಸಿರುವಂತೆ ಇಲ್ಲಿಯವರೆಗೆ ಕಾರ್ಯ ನಿರ್ವಹಿಸಿದ್ದೇನೆ. ಈ ಹಿಂದೆ ಮಹಾರಾಷ್ಟ್ರ ರಾಜ್ಯಪಾಲರಾಗಿ ಆಯ್ಕೆ ಮಾಡಿದಾಗ ಹೈಕಮಾಂಡ್ ಅಣತಿಯಂತೆ ಅಲ್ಲಿಗೆ ತೆರಳಿದ್ದೆ. ಈಗ ಚುನಾವಣಾ ಪ್ರಚಾರ ನಡೆಸಲು ರಾಜ್ಯಕ್ಕೆ ಕಳುಹಿಸಿದ್ದಾರೆ. ಮುಂದೆ ಮುಖ್ಯಮಂತ್ರಿ ಹುದ್ದೆ ನೀಡಿದರೆ ವಿನಮ್ರವಾಗಿ ಸ್ವೀಕರಿಸುವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಚುನಾವಣೆ ಬಳಿಕ ಎರಡು ಸಮ್ಮಿಶ್ರ ಸರ್ಕಾರದಿಂದ ಬೇಸತ್ತಿರುವ ಮತದಾರರು ಸ್ಥಿರ ಸರ್ಕಾರದ ಅವಶ್ಯಕತೆಯನ್ನು ಮನಗಂಡಿದ್ದಾರೆ. ಈ ನಿಟ್ಟಿನಲ್ಲಿ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡುವ ನೀರೀಕ್ಷೆ ಇದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದು ಬಿಜೆಪಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ಬಾಂಬ್ ಸ್ಪೋಟಗೊಂಡ ಜೈಪುರದಲ್ಲಿ ಬಿಜೆಪಿ ಸರ್ಕಾರವಿದೆ. ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಮರುಪ್ರಶ್ನೆ ಹಾಕಿದರು. ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಯುಪಿಎ ಸರ್ಕಾರ ಉಗ್ರರ ಉಪಟಳಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಲೇ ಇದೆ ಎಂದು ತಿಳಿಸಿದರು.
|