ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಿದ್ದು, 130 ಸ್ಥಾನಗಳಲ್ಲಿ ಪಕ್ಷ ಗೆಲುವನ್ನು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲೆಡೆ ಪಕ್ಷ ಚುನಾವಣಾ ಪ್ರಚಾರ ನಡೆಸಿದ್ದು, ಎಲ್ಲಾ ಭಾಗಗಳಲ್ಲಿಯೂ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಯಾವುದೇ ಅಭಿವೃದ್ದಿ ಕೆಲಸಗಳ ಹಿಂದೆ ಕಾಂಗ್ರೆಸ್ ಕೊಡುಗೆ ಇರುವುದು ಸ್ಪಷ್ಟವಾಗಿ ತಿಳಿದಿರುವ ಅಂಶ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಯೋತ್ಪಾದನೆ ಕುರಿತು ಮಾತನಾಡಿದ ಅವರು, ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಜಾರಿಗೆ ತಂದಿರುವ ಪೋಟಾ ಕಾಯಿದೆ ಯಾವ ಪ್ರಯೋಜನಕ್ಕೂ ಬರಲಿಲ್ಲ. ಆ ಸಂದರ್ಭದಲ್ಲಿ ದೇಶದಲ್ಲಿ ಭಯೋತ್ಪಾದನೆ ಹುಟ್ಟಿದ್ದು ಎಂದು ಅವರು ಆರೋಪಿಸಿದ್ದಾರೆ.
ಆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಭಯೋತ್ಪಾದಕರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿದೆ ಎಂದು ತಿಳಿಸಿದ ಅವರು, ಭಯೋತ್ಪಾದಕತೆ ಹತ್ತಿಕ್ಕುವಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ಎಂದು ತಿಳಿಸಿದ್ದಾರೆ.
|