ರಾಜ್ಯ ವಿಧಾನಸಭೆಯ 69 ಕ್ಷೇತ್ರಗಳಲ್ಲಿ 22ರಂದು ನಡೆಯಲಿರುವ 3ನೇ ಹಂತದ ಮತದಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆಗಳಿದ್ದರೂ, ಒಟ್ಟಾರೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ.
ಸುವರ್ಣ ವಾಹಿನಿ ಹಾಗೂ ಸಿ-ಫೋರ್ ಸಂಸ್ಥೆ ಜಂಟಿಯಾಗಿ ನಡೆಸಿದ ಮತದಾನ ಪೂರ್ವ ಸಮೀಕ್ಷಾ ವರದಿ ಪ್ರಕಾರ, 69 ಕ್ಷೇತ್ರಗಳಲ್ಲಿ ಬಿಜೆಪಿಗೆ 39ರಿಂದ 46, ಕಾಂಗ್ರೆಸ್ 14ರಿಂದ 20, ಜೆಡಿಎಸ್ 3ರಿಂದ 5 ಹಾಗೂ ಇತರರು 1ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿದೆ.
ರಾಜ್ಯದ ಒಟ್ಟು 224 ಸ್ಥಾನಗಳಲ್ಲಿ ಈ ಸಂಸ್ಥೆಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಅನ್ವಯ ಬಿಜೆಪಿಗೆ ಗರಿಷ್ಠ ಸ್ಥಾನ ಗಳಿಸುವುದೆಂದು ತಿಳಿಸಿದ್ದರೂ, ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಸಿಗುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಮತ್ತೆ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ತಿಳಿಸಿದೆ.
ಅದರಂತೆ ಬಿಜೆಪಿಗೆ 96ರಿಂದ 106 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಆ ಪಕ್ಷಕ್ಕೆ 73ರಿಂದ 83 ಸ್ಥಾನಗಳು ಲಭಿಸಲಿದ್ದರೆ, ಜೆಡಿಎಸ್‌ಗೆ 32ರಿಂದ 38 ಸ್ಥಾನಗಳು ಸಿಗಲಿದೆ. ಉಳಿದಂತೆ ಇತರ ಪಕ್ಷಗಳು 6ರಿಂದ 10 ಕ್ಷೇತ್ರಗಳಲ್ಲಿ ಜಯಗಳಿಸುವ ಸಂಭವವಿದೆ ಎಂದು ಸಮೀಕ್ಷೆ ತಿಳಿಸಿದೆ.
ಈ ಮೂಲಕ ಅತಂತ್ರ ವಿಧಾನಸಭೆಯಲ್ಲಿ ಮತ್ತೆ ಮೈತ್ರಿ ಸರ್ಕಾರವೇ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಹೆಚ್ಚಳವಾಗಿದೆ. ಅಲ್ಲದೆ, ಜೆಡಿಎಸ್ ಮತ್ತೊಮ್ಮೆ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಈ ಸಮೀಕ್ಷೆಯಿಂದ ತಿಳಿದು ಬರುವ ಇನ್ನೊಂದು ಅಂಶ.
ಮೊದಲ ಹಂತದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಅದೇ ರೀತಿ ಬಿಜೆಪಿ ಕೆಲವು ಸ್ಥಾನಗಳನ್ನು ಪಡೆಯುವ ಮೂಲಕ ಜೆಡಿಎಸ್‌ನ ಭದ್ರಕೋಟೆಯನ್ನು ತುಸು ಜಖಂಗೊಳಿಸಿತ್ತು ಎಂದು ಹೇಳಲಾಗಿತ್ತು. ಆದರೆ ಎರಡನೇ ಹಂತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಹೋರಾಟವನ್ನು ಸಮೀಕ್ಷೆ ಪ್ರಕಟಿಸಿತ್ತು. ಆದರೆ, ಮೂರನೇ ಹಾಗೂ ಕೊನೆಯ ಹಂತದ ಸಮೀಕ್ಷೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ತಿಳಿಸಿದೆ.
|