ಮೇ 22 ರಂದು ಮೂರನೇ ಹಂತದ ಚುನಾವಣೆ ನಡೆಯುತ್ತಿರುವ ಕಲಘಟಗಿ ವಿಧಾನ ಸಭಾ ಕ್ಷೇತ್ರವನ್ನು ಚುನಾವಣಾ ಆಯೋಗವು ಅತಿ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದ್ದು, ಕಲಘಟಗಿಯಲ್ಲಿ ನ್ಯಾಯಯುತ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ರೇಮಂಡ್ ಪೀಟರ್ ಅವರನ್ನು ಚುನಾವಣಾ ವೀಕ್ಷಕ ಎಂದು ನೇಮಕ ಮಾಡಿದೆ.
ಬಳ್ಳಾರಿ ಜಿಲ್ಲೆಯ ಸಂಡೂರಿನ ಗಣಿ ಉದ್ಯಮಿ ಸಂತೋಷ್ ಲಾಡ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದ ವತಿಯಿಂದ ಸಿ. ಎಂ. ನಿಂಬಣ್ಣವರ್, ಬಿಎಸ್‌ಪಿಯ ಕಾಶೀಮನವರ ಮತ್ತು ಸಂತೋಷ್ ಲಾಡ್ ನಡುವೆ ತ್ರಿಕೋನ ಸ್ಪರ್ಧೆ ಎರ್ಪಟ್ಟಿದೆ. ಜೆಡಿಎಸ್ ವತಿಯಿಂದ ಐ.ಸಿ ಗೋಕುಲ್ ಅವರು ಹುರಿಯಾಳು ಆಗಿ ಕಣದಲ್ಲಿದ್ದಾರೆ.
ಬಳ್ಳಾರಿಯ ಗಣಿ ಉದ್ಯಮಿ ಸಂತೋಷ್ ಲಾಡ್ ಅವರು ಚುನಾವಣಾ ಕಣದಲ್ಲಿ ಇರುವುದರಿಂದ ಮತ್ತು ಅವರು ಹಣದ ಹೊಳೆಯನ್ನು ಹರಿಸುತ್ತಿರುವ ಆರೋಪ ವಿರೋಧಿ ಅಭ್ಯರ್ಥಿಗಳಿಂದ ಬರುತ್ತಿರುವ ಕಾರಣ ಚುನಾವಣಾ ಆಯೋಗವು ರೇಮಂಡ್ ಪೀಟರ್ ಅವರನ್ನು ಮುಖ್ಯ ವೀಕ್ಷಕ ಎಂದು ನೇಮಕ ಮಾಡಿದೆ.
ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಬಿಗಿ ಬಂದೋ ಬಸ್ತ್ ಒದಗಿಸಲಾಗಿದ್ದು, ಚುನಾವಣಾ ಆಯೋಗವು ಎಲ್ಲಾ ಕಡೆಗಳಲ್ಲಿಯೂ ಹದ್ದಿನ ಕಣ್ಣಿಟ್ಟಿದೆ. ಅಲ್ಲದೆ, ರೇಮಂಡ್ ಪೀಟರ್ ಅವರನ್ನು ಕಲಘಟಗಿ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡುವ ಮೂಲಕ ಆ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ.
ರೇಮಂಡ್ ಪೀಟರ್ ತಮ್ಮ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೂ ದಿಢೀರ್ ಭೇಟಿ ನೀಡಿ ಪರೀಶೀಲನೆ ನಡೆಸುತ್ತಿದ್ದಾರೆ.
|