ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧೆಡೆ ಸಂಭವಿಸಿದ ಕಳ್ಳಭಟ್ಟಿ ದುರಂತಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡೆಸಿರುವ ಪಿತೂರಿಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿದರೆ ಸತ್ಯ ಏನೆಂಬುದು ಬಹಿರಂಗವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಈ ಎರಡು ಪಕ್ಷಗಳು ಕಾರಣವಾಗಿದ್ದರೂ, ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಮಾಡುತ್ತಿವೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದರು.
ಕಡಿಮೆ ಬೆಲೆಗೆ ದೊರೆಯುತ್ತಿದ್ದ ಮದ್ಯದ ದರವನ್ನು ರಾಜ್ಯಪಾಲರ ಆಳ್ವಿಕೆಯಲ್ಲಿ ದಿಢೀರ್ ಹೆಚ್ಚಿಸಲಾಗಿತ್ತು. ಇದುವೇ ಕಳ್ಳಭಟ್ಟಿ ದುರಂತಕ್ಕೆ ಕಾರಣವಾಯಿತು ಎಂದು ಅವರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ಕುರಿತು ಮಾತನಾಡಿದ ಅವರು, ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದುವರೆಗಿನ ಯಾವ ಸಮೀಕ್ಷೆಗಳು ನಿಜವಾಗಿಲ್ಲ. ಈ ಬಾರಿ ಬಿಜೆಪಿಗೆ ಸೂಕ್ತ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
|