ರಾಜ್ಯದ ಎಲ್ಲಾ 224 ಕ್ಷೇತ್ರಗಳ ಮತದಾನ ಪೂರ್ಣಗೊಂಡಿದೆ. ಮತದಾರರು ತಮ್ಮ ಪರಮೋಚ್ಛ ಹಕ್ಕನ್ನು ಚಲಾಯಿಸಿದ್ದು ಭವಿಷ್ಯದ ನಾಯಕನನ್ನು ಆರಿದ್ದಾರೆ. ಆ ಎಲ್ಲವು ಸದ್ಯವೀಗ ಮತಪೆಟ್ಟಿಗೆಯೊಳಗೆ ಭದ್ರವಾಗಿದೆ. ಮತಎಣಿಕೆಯ ಸೂಪರ್ ಸಂಡೇಗಾಗಿ ಕ್ಷಣಗಣನೆ ಆರಂಭವಾಗಿದೆ.
ಮೂರು ಹಂತದ ಚುನಾವಣೆಯು ಮುಗಿದಿದ್ದು, ಇದೇ ಭಾನುವಾರ ಮತ ಎಣಿಕೆ ಕೆಲಸ ನಡೆಯಲಿದೆ. ಬಿಜೆಪಿಯು ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಗಿಳಿದಿದ್ದರೆ, ಕಾಂಗ್ರೆಸ್ 222 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಶಿಕಾರಿಪುರದಲ್ಲಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಿ ಕಣದಿಂದ ಹಿಂದೆ ಸರಿದಿದ್ದರೆ, ಅಭ್ಯರ್ಥಿಗಳ ಗೊಂದಲದಿಂದಾಗಿ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸಾಧ್ಯವಾಗಿಲ್ಲ.
ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆಯ ಚುನಾವಣೆ ರಾಷ್ಟ್ರದ ಗಮನ ಸೆಳೆದಿದ್ದು ಇಲ್ಲಿನ ಫಲಿತಾಂಶ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿದೆ. ಈಗಾಗಲೇ ಹಲವಾರು ಚುನಾವಣಾ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಕುರಿತು ತಿಳಿಸಿದೆ. ಇದರಿಂದ ಮತ್ತೊಮ್ಮೆ ಮೈತ್ರಿ ಸರ್ಕಾರ ನಿರ್ಮಾಣವಾಗುವ ಲಕ್ಷಣಗಳು ಕಾಣತೊಡಗಿದೆ.
|