ಕರ್ನಾಟಕ ವಿಧಾನಸಭಾ ಚುನಾವಣೆಯ 3ನೇ ಹಂತದ ಮತದಾನದ ಸಂದರ್ಭದಲ್ಲಿ ಎನ್‌ಡಿಟಿವಿ ನಡೆಸಿದ ಮತಗಟ್ಟೆ ಸಮೀಕ್ಷೆಯೂ ಪ್ರಕಾರ ಭಾರತೀಯ ಜನತಾ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದಲ್ಲಿನಡೆದ ಮೂರೂ ಹಂತದ ಚುನಾವಣೆಯಲ್ಲಿಯೂ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಪಡೆಯಲಿದೆ ಎಂಬ ಅಂಶ ಸಮೀಕ್ಷೆಯಿಂದ ವ್ಯಕ್ತವಾಗಿದೆ.
ಆದರೆ, ಇತರ ಸಮೀಕ್ಷಗಳ ಪ್ರಕಾರ ಯಾವುದೇ ಪಕ್ಷಗಳಿಗೂ ಬಹುಮತ ದೊರೆಯಲಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು, ರಾಜ್ಯವು ಇನ್ನೊಮ್ಮೆ ಅತಂತ್ರ ಸ್ಥಿತಿಗೆ ಹೋಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಎನ್‌ಡಿಟಿವಿ ಸಮೀಕ್ಷೆ ಪ್ರಕಾರ, ಮೂರನೇ ಹಂತದಲ್ಲಿ 69 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 30-40, ಕಾಂಗ್ರೆಸ್ 20-30, ಜೆಡಿಎಸ್ 10-12 ಸ್ಥಾನ ಪಡೆಯಲಿದೆ.
ಒಟ್ಟು ಮೂರು ಹಂತಗಳ ಚುನಾವಣೆ ವೇಳೆ ಮತಗಟ್ಟೆ ಸಮೀಪದ ಸಮೀಕ್ಷೆಯ ಪ್ರಕಾರ ಬಿಜೆಪಿ 95 ರಿಂದ 115 ಸ್ಥಾನಗಳನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಲಿದೆ. ಕಾಂಗ್ರೆಸ್ 55-75 ಸ್ಥಾನ ಗಳಿಸಿದರೆ, ಜನತಾದಳ(ಎಸ್) 45-55 ಸ್ಥಾನ ಪಡೆಯಲಿದೆ. ಉಳಿದವರು 10-15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
ಸಿಎನ್ಎನ್-ಐಬಿಎನ್ ಸಮೀಕ್ಷೆ ಸಿಎನ್ಎನ್-ಐಬಿಎನ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 86ರಿಂದ 95 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಅದರ ಪ್ರಕಾರ ಬಿಜೆಪಿಯು 79ರಿಂದ 90 ಸ್ಥಾನಗಳನ್ನು ಪಡೆದರೆ, ಜೆಡಿಎಸ್ 45 ಸ್ಥಾನಗಳನ್ನು ಪಡೆಯಲಿದೆ. ಇತರರು 14 ಸ್ಥಾನಗಳನ್ನು ಕಬಳಿಸಲಿದ್ದಾರೆ. ಇವೆಲ್ಲವೂ 112 ಸ್ಥಾನಗಳಿಗಿಂತ ದೂರವೇ ಇದೆ ಎಂದು ಈ ಸಮೀಕ್ಷೆ ಹೇಳಿದೆ.
ಈ ಸಮೀಕ್ಷೆಯನ್ನು ಸಿಎನ್ಎನ್-ಐಬಿಎನ್, ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ ಮತ್ತು ಡೆಕ್ಕನ್ ಹೆರಾಲ್ಡ್‌ಗಳು ಒಟ್ಟು 92 ಸ್ಥಳಗಳಲ್ಲಿ 4,348 ಮತದಾರರ ಅಭಿಪ್ರಾಯ ಸಂಗ್ರಹಿಸಿದೆ.
ಈ ಬಾರಿ ಕರ್ನಾಟಕದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಧಾರದ ಮೇಲೆ ಚುನಾವಣೆ ನಡೆದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದೆ. ಅದರಂತೆಯೇ 224 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಮೂರು ಹಂತದ ಚುನಾವಣೆ ಬಹುತೇಕ ಶಾಂತವಾಗಿಯೇ ಮುಕ್ತಾಯಗೊಂಡಿದ್ದು. ಮೇ 25ರಂದು ಭಾನುವಾರ ಮತಎಣಿಕೆ ಕಾರ್ಯ ನಡೆಯಲಿದೆ.
|