ಕೊನೆಗೂ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಉದ್ಘಾಟನೆಗೆ ಕಾಲಕೂಡಿ ಬಂದಿದೆ. ನಿರಂತರವಾಗಿ ಮೂರು ಬಾರಿ ಮುಂದೂಡಲ್ಪಟ್ಟ ಉದ್ಘಾಟನಾ ಕಾರ್ಯಕ್ರಮ ಇಂದು ರಾತ್ರಿ ಹನ್ನೆರಡು ಗಂಟೆ ಒಂದು ನಿಮಿಷಕ್ಕೆ ನಡೆಯಲಿದೆ. ಇದೇ ವೇಳೆಗೆ ಇಂಡಿಯನ್ ಏರ್‌ಲೈನ್ಸ್ ವಿಮಾನ ಪ್ರಯಾಣಿಕರನ್ನು ಹೊತ್ತೊಯ್ದು ಸಿಂಗಾಪುರಕ್ಕೆ ಹಾರಲಿದೆ.
ವಿವಾದದ ಕರಿನೆರಳು: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರಂಭದಿಂದಲೂ ವಿವಾದದ ಕರಿನೆರಳು. ಭೂಮಿ ಸ್ವಾಧೀನ ಪ್ರಕ್ರಿಯೆಯಿಂದ ತೊಡಗಿ ಇದೀಗ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಬೇಕು ಎಂಬುವವರೆಗೆ ಗೊಂದಲಗಳು ನಡೆದೇ ಇವೆ. ಜೊತೆಗೆ ಚುನಾಯಿತ ಸರ್ಕಾರವೂ ರಾಜ್ಯದಲ್ಲಿ ಇಲ್ಲದಿರುವುದರಿಂದ ನಿಲ್ದಾಣದ ಉದ್ಘಾಟನೆ ನೀರಸವಾಗಲಿದೆ.
ಕಳೆದೆರಡು ದಿನಗಳಿಂದ ದೇವನಹಳ್ಳಿ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಬಿಡೆವು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪಟ್ಟು ಹಿಡಿದಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಉದ್ಘಾಟನೆಗೆ ಆಡ್ಡಿಪಡಿಸುವರೆಂಬ ಕಾರಣಕ್ಕೆ ಮುಂಜಾಗರೂಕತೆಯಾಗಿ ಬಂಧಿಸಿದ್ದಾರೆ. ಇದು ಕರವೇ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಉದ್ಘಾಟನೆಗೆ ಪೂರ್ವಸಿದ್ಧತೆಗಳನ್ನು ಬಿಐಎಎಲ್ ಕೈಗೊಂಡಿದೆ.
|