ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ವಾರಾಂತ್ಯದ ಮೋಜಿಗೆ ಸಿದ್ಧವಾಗುತ್ತಿದ್ದ ಜನತೆಗೆ ದು:ಸ್ವಪ್ನವಾಗಿ ಕಾಡಿತು. ನೃಪತುಂಗ ರಸ್ತೆಯ ಡಿಜಿ ಹಾಗೂ ಐಜಿಪಿ ಅವರ ನಿವಾಸದೆದುರು ಮರವೊಂದು ಧರೆಗುರುಳಿದ ಪರಿಣಾಮ ಕೆಲಕಾಲ ಸಂಚಾರಿ ದಟ್ಟಣೆ ಉಂಟಾಗಿತ್ತು ಅಲ್ಲದೇ, ಎರಡು ಕಾರುಗಳು ಜಖಂಗೊಂಡಿವೆ.
ಮರ ಉರುಳಿ ಸಂಚಾರಿ ದಟ್ಟಣೆ ಉಂಟಾದ ಕಾರಣ ಸಂಚಾರಿ ಪೊಲೀಸರು ವಾಹನ ಸಂಚಾರವನ್ನು ಕಬ್ಬನ್ ರಸ್ತೆಗೆ ವರ್ಗಾಯಿಸಿದರು. ನಂತರ ಬಿಬಿಎಂಪಿ ಸಿಬ್ಬಂದಿಗಳು ನೆಲಕ್ಕುರುಳಿದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಗರದ ಸುಮಾರು 30 ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ನಿವಾಸಿಗಳು ನರಕಯಾತನೆ ಅನುಭವಿಸಬೇಕಾಯಿತು. ರಾಜಾಜಿನಗರ ಹಾಗೂ ಮಾಧವನಗರದಲ್ಲೂ ಎರಡು ಮರಗಳು ಧರೆಗುರುಳಿವೆ. ಹಲವು ಕಡೆ ಲೈಟ್ ಕಂಬಗಳು ನೆಲಕ್ಕುರುಳಿವೆ. ಶುಕ್ರವಾರ ನಗರದಲ್ಲಿ 14.4 ಮಿ.ಮಿ ಮಳೆಯಾಗಿದೆ. ವರ್ಷಧಾರೆ ಈ ತಿಂಗಳ ಕೊನೆವರೆಗೆ ಮುಂದುವರೆಯುವ ಸಾಧ್ಯತೆ ಇದೆ.
ಸಿಡಿಲು ಬಡಿದು ಸಾವು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಸೀಮಾದಲ್ಲಿ 5 ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
|