ಒಂದೆಡೆ ಸಂತಸವಾದರೆ ಮತ್ತೊಂದೆಡೆ ಸೂತಕ ಮನೆ ಮಾಡಿತು. ಒಂದು ಆರಂಭವಾಗುತ್ತಿದ್ದಂತೆ ಮತ್ತೊಂದು ಅನಿವಾರ್ಯವಾಗಿ ಮುಚ್ಚಲೇ ಬೇಕಾಯಿತು. ಶುಕ್ರವಾರ ರಾತ್ರಿ ದೇವನಹಳ್ಳಿ ಬಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುತ್ತಿದ್ದಂತೆ ಪ್ರತಿ ವರ್ಷ 75 ಲಕ್ಷ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುತ್ತಿದ್ದ ಎಚ್ಎಎಲ್ ವಿಮಾನ ನಿಲ್ದಾಣ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.
ಹಲವು ದಶಕಗಳ ಕಾಲ ಕರ್ನಾಟಕದ ಜನತೆಗೆ ವಾಯುಯಾನ ಸೇವೆ ನೀಡಿದ ಎಚ್ಎಎಲ್ ಅನಿವಾರ್ಯವಾಗಿ ತನ್ನ ಸೇವೆಗೆ ವಿದಾಯ ಹೇಳಿತು. ಶುಕ್ರವಾರ ರಾತ್ರಿ 9 ಗಂಟೆವರೆಗೂ ಎಚ್ಎಎಲ್ ಎಂದಿನಂತೆ ತನ್ನ ಸೇವೆಯನ್ನು ನೀಡುತಿತ್ತು. ಆದರೆ ಹೊಸ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಿದ್ದಂತೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.
1964 ರಲ್ಲಿ ಆರಂಭವಾದ ಈ ನಿಲ್ದಾಣ ದೇಶದ ನಾಲ್ಕನೇ ಜನದಟ್ಟನೆ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಲ್ಲಿ ಪ್ರತಿನಿತ್ಯ ಸುಮಾರು 550 ವಿಮಾನಗಳು ಬಂದು ಇಳಿಯುವುದು, ಹಾರುವುದು ಮಾಡುತ್ತಿದ್ದವು. ಈ ವಿಮಾನ ನಿಲ್ದಾಣದ ವರ್ಷದ ಕಾರ್ಯಕ್ಷಮತೆ 36 ಲಕ್ಷ ಇತ್ತು. ಆದರೆ ಇದು ಅದನ್ನು ಮೀರಿ 75 ಲಕ್ಷ ಜನರಿಗೆ ಸೇವೆ ನೀಡುತಿತ್ತು.
|