ರಾಜ್ಯದಲ್ಲಿ ನಡೆದ ಕಳ್ಳಬಟ್ಟಿ ದುರಂತಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಏಕಾಏಕಿ ಸಾರಾಯಿ ನಿಷೇಧಿಸಿದ್ದೆ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಸಾರಾಯಿ ನಿಷೇಧಿಸಿದ್ದರಿಂದ ಇಂದು ಅನೇಕ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದರು.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಮ್ಮ ಪಕ್ಷದ ಕೆಲವು ನಾಯಕರು ಸಾರಾಯಿ ನಿಷೇಧವನ್ನು ರದ್ದುಪಡಿಸುವುದಾಗಿ ಹೇಳಿದ್ದನ್ನು ಇತರ ಪಕ್ಷಗಳು ದೊಡ್ಡ ವಿಷಯವನ್ನಾಗಿ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ನಡೆದ ದುರಂತಕ್ಕೆ ಸಮ್ಮಿಶ್ರ ಸರ್ಕಾರ ಅದರಲ್ಲೂ ಬಿಜೆಪಿ ಕಾರಣ ಎಂದು ದೂರಿದರು.
ಇಂತಹ ಪ್ರಕರಣಗಳ ಕುರಿತು 28 ವರ್ಷಗಳ ಹಿಂದೆ ದೇಸಾಯಿ ಸಮಿತಿ ಸಲ್ಲಿಸಿರುವ ವರದಿ ಹಾಗೂ ಇತ್ತೀಚೆಗೆ ಈ ಪ್ರಕರಣಗಳ ಕುರಿತು ಕೆಲವು ಸಮಿತಿಗಳು ಸಲ್ಲಿಸಿರುವ ವರದಿಯನ್ನು ಪರೀಶೀಲಿಸಿ ಹೊಸ ನೀತಿಯನ್ನು ರೂಪಿಸಲು ಪ್ರಯತ್ನಿಸಬೇಕೆಂದು ಹೇಳಿದರು. ಈ ದುರಂತಕ್ಕೆ ಕಾರಣವಾದ ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
|