ಸದಾ ಗಿಜಿಗುಡುತ್ತಿದ್ದ, ಅತಿರಥ ಮಹಾರಥರು ಬಂದಿಳಿಯುತ್ತಿದ್ದ ಎಚ್ಎಎಲ್ ವಿಮಾನ ನಿಲ್ದಾಣ ಈಗ ಅನಾಥ. ಅಲ್ಲಿಲ್ಲಿ ಒಂದಿಷ್ಟು ಮಂದಿ ಪೊಲೀಸರು, ಹಾಗೂ ಶುಚಿಗೊಳಿಸುವ ಕಾರ್ಮಿಕರನ್ನು ಹೊರತುಪಡಿಸಿದರೆ ಅಲ್ಲಿ ಯಾರೂ ಇಲ್ಲ.
ದೇಶದ ಅತಿಹೆಚ್ಚು ಚಟುವಟಿಕೆಯುಳ್ಳ ನಾಲ್ಕನೆಯ ವಿಮಾನ ನಿಲ್ದಾಣವೆಂದೇ ಬಿಂಬಿತವಾಗಿದ್ದ ಎಚ್.ಎ.ಎಲ್. ವಿಮಾನ ನಿಲ್ದಾನದಲ್ಲಿ ಈಗ ಸ್ಮಶಾನ ಮೌನ. ವಿಮಾನಗಳೆಲ್ಲ ದೇವನಹಳ್ಳಿಯತ್ತ ತಿರುಗಿವೆ. ಹಳೆಯ ವಿಮಾನ ನಿಲ್ದಾಣದಿಂದ ಹೊಸ ನಿಲ್ದಾಣದತ್ತ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಗುಳೆ ಹೊರಟಿದ್ದಾರೆ. ಅಲ್ಲಿ ವಿಮಾನಗಳ ಹಾರಾಟ ಜೋರಾಗಿದ್ದರೆ, ಇಲ್ಲಿ ಸೂತಕದ ಛಾಯೆ.
ಪ್ರತಿನಿತ್ಯ ತಪಾಸಣೆ ಮಾಡಿ ಪ್ರಯಾಣಿಕರನ್ನು ಒಳಗೆ ಬಿಡುತ್ತಿದ್ದ ಗನ್ ಮ್ಯಾನ‌್‌ಗಳಿಗೆ ಕೆಲಸವಿಲ್ಲ. ಗಿಜಿಗುಡುತ್ತಿದ್ದ ಏರ್ ಪೋರ್ಟ್ ಆವರಣದಲ್ಲಿ ಈಗ ಬೀದಿನಾಯಿಗಳದ್ದೇ ಕಾರುಬಾರು ಕಂಡುಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
1997ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಂಡಿದ್ದ ಎಚ್ಎಎಲ್ ವಿಮಾನ ನಿಲ್ದಾಣ ಕಳೆದ 11 ವರ್ಷಗಳಲ್ಲಿ ಸುಮಾರು 75 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಿದೆ. ಅದಕ್ಕೂ ಮೊದಲು ಅಂದರೆ 1980ರಲ್ಲಿ ಇಲ್ಲಿ ಸ್ಥಳೀಯ ವಿಮಾನಗಳ ವಾಣಿಜ್ಯ ಕಾರ್ಯಗಳ ಸೇವೆಯನ್ನು ಇಲ್ಲಿ ಆರಂಭಿಸಿದ್ದು ಇಂದಿಗೆ ಇತಿಹಾಸವಾಗಿ ಉಳಿದಿದೆ.
|