ಕರ್ನಾಟಕ ವಿಧಾನಸಭೆಗೆ ಮೂರು ಹಂತಗಳಲ್ಲಿ ನಡೆದ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಬರಲಾರಂಭಿಸಿದ್ದು, 224 ಸ್ಥಾನಗಳಿಗೆ ಆಯ್ಕೆಯ ಆಕಾಂಕ್ಷೆಯಲ್ಲಿರುವ 2,241 ಅಭ್ಯರ್ಥಿಗಳ ಹೃದಯ ಬಡಿತದ ವೇಗ ಹೆಚ್ಚಾಗಿದೆ.
ರಾಜ್ಯದ 4.07 ಕೋಟಿ ಮತದಾರರಲ್ಲಿ ಮೂರು ಹಂತಗಳಲ್ಲಿ ಒಟ್ಟಾರೆಯಾಗಿ ಶೇ.64.72 ಮಂದಿ ತಮ್ಮ ಹಕ್ಕು ಚಲಾಯಿಸಿ, ತಮ್ಮ ಪ್ರತಿನಿಧಿ ಯಾರಾಗಬೇಕು ಎಂದು ನಿರ್ಧರಿಸಿದ್ದಾರೆ. ಆದರೆ 2004ರಲ್ಲಿ ನಡೆದ ಚುನಾವಣೆ ಸಂದರ್ಭ ಮತದಾನವಾದ ಶೇ.64.9 ಪ್ರಮಾಣಕ್ಕೆ ಹೋಲಿಸಿದರೆ ಇದು ಒಂದಿಷ್ಟು ಕಡಿಮೆ ಎಂಬುದು ಗಮನಿಸಬೇಕಾದ ಸಂಗತಿ. 2004ರಲ್ಲಿ 1,715 ಅಭ್ಯರ್ಥಿಗಳು ಕಣದಲ್ಲಿದ್ದರು.
ಭಾನುವಾರ ಬೆಳಿಗ್ಗೆ 8 ಗಂಟೆಗೆ ರಾಜ್ಯದ 48 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದ್ದು, ಅಪರಾಹ್ನ ಮೂರ್ನಾಲ್ಕು ಗಂಟೆ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಕೂಡ ಬಹುಮತ ಪಡೆಯಲು ಬೇಕಿರುವ 113 ಸಂಖ್ಯಾಬಲವನ್ನು ಒಟ್ಟುಗೂಡಿಸಲು ಜೋರಾಗಿಯೇ ಕಸರತ್ತು ಆರಂಭಿಸಿವೆ. ಕಾಂಗ್ರೆಸ್ 222 ಕ್ಷೇತ್ರಗಳಲ್ಲಿ, ಬಿಜೆಪಿ 224 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ 219 ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ಕಣಕ್ಕಿಳಿಸಿತ್ತು.
2004ರಲ್ಲಿ ಕಾಂಗ್ರೆಸ್ -65, ಬಿಜೆಪಿ 79 ಹಾಗೂ ಜೆಡಿಎಸ್ 58 ಸ್ಥಾನಗಳನ್ನು ತಮ್ಮದಾಗಿಸಿಕೊಂಡು ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಆ ಬಳಿಕ, ಅತೀ ಕಡಿಮೆ ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ತಂತ್ರಗಾರಿಕೆ ರೂಪಿಸಿ, ಕಾಂಗ್ರೆಸ್ ಜತೆಗೆ 20 ತಿಂಗಳು, ಬಿಜೆಪಿ ಜತೆಗೆ 20 ತಿಂಗಳು ಅಧಿಕಾರದ ಸವಿಯುಂಡಿತ್ತು ಮತ್ತು ಎರಡೂ ಸರಕಾರಗಳನ್ನು ಉರುಳಿಸಿತ್ತು.
|