'ನಮ್ಮ ಬೆಂಬಲವಿಲ್ಲದೆ ಯಾರು ಸರಕಾರ ರಚಿಸ್ತಾರೋ ನೋಡ್ತೀವಿ' ಅಂತ ಹೇಳುವ ಮೂಲಕ ಅತಂತ್ರ ವಿಧಾನಸಭೆಯ ಸಾಧ್ಯಾಸಾಧ್ಯತೆಗಳಿಗೆ ಮುನ್ನುಡಿ ಬರೆದಿದ್ದ ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಥಾನಗಳು ಎಲ್ಲ ಪಕ್ಷಗಳ ನಡುವೆ ಹಂಚಿಹೋಗುವ ಸಾಧ್ಯತೆಯ ನಡುವೆ ಮತ್ತೆ ಕಿಂಗ್-ಮೇಕರ್ ಆಗಲು ಸಜ್ಜಾಗುತ್ತಿದ್ದಾರೆ.
ಯಾವುದೇ ಪಕ್ಷವೂ ಸ್ವಂತ ಬಲದಲ್ಲಿ ಅಧಿಕಾರಕ್ಕೇರುವುದು ಅಸಾಧ್ಯ ಎಂಬುದು ಈಗಾಗಲೇ ಎಲ್ಲೆಡೆ ವ್ಯಕ್ತವಾಗಿರುವ ಅಭಿಪ್ರಾಯ. ಈ ಭಾವನೆಯನ್ನು ಅನುಸರಿಸಿದರೆ, ದೇವೇಗೌಡರನ್ನು, ಜೆಡಿಎಸ್ ಅನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಬಿಜೆಪಿಗಳು ಒಟ್ಟು ಸೇರಿ ಸರಕಾರ ರಚಿಸುವುದು ದೂರದ ಮತ್ತು ಅಸಾಧ್ಯದ ಮಾತು.
'ಕೋಮುವಾದಿ' ಎಂದು ಎದುರು ಪಕ್ಷಗಳಿಂದ ಮೂದಲಿಕೆ ಎದುರಿಸುತ್ತಲೇ ಬಂದಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪುನಃ ಒಂದಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ತಮ್ಮ ಜೊತೆ ಮತ್ತೆ ಕೈಜೋಡಿಸಿದರೆ ದೇವೇಗೌಡರ ತಂತ್ರಗಳಿಗೆ ಕಾಂಗ್ರೆಸ್ ನಾಯಕರು ಈ ಬಾರಿ ಸೊಪ್ಪು ಹಾಕುವಲ್ಲಿ, ಅನುಭವದ ಆಧಾರದಲ್ಲಿ ಸ್ವಲ್ಪ ಹಿಂದೆ-ಮುಂದೆ ನೋಡಬಹುದು.
ಆದರೆ ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ ಎಂಬ ಅಲಿಖಿತ ನಿಯಮವನ್ನು ಪರಿಗಣಿಸಿದರೆ, ಯಾವುದೇ ನಿರ್ಧಾರ ಕೂಡ ಮತದಾರನ ಕೈಯಲ್ಲಿಲ್ಲ, ಆರಿಸಿ ಬಂದ ಜನಪ್ರತಿನಿಧಿಗಳ ಕೈಯಲ್ಲೇ, ಅವರಿಗೆ ಸಿಗುವ ಅಧಿಕಾರವನ್ನೇ ಆಧರಿಸಿದೆ ಎಂಬುದು ಸಾರ್ವಕಾಲಿಕ ಸತ್ಯ.
|