ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದೇ ಭಾರತೀಯ ಜನತಾ ಪಕ್ಷದ ಮೂಲ ಮಂತ್ರವಾಗಿದ್ದು, ರಾಜ್ಯವನ್ನು ಅಪರಾಧ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರದಂದು ಪಕ್ಷದ ಜಯಭೇರಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ನೀಡಿದ ಈ ಐತಿಹಾಸಿಕ ತೀರ್ಪನ್ನು ಸಂತೋಷದಿಂದ ಸ್ವೀಕರಿಸುವುದಾಗಿ ನುಡಿದ ಅವರು, ಈ ನಾಡಿನ ನೆಲ, ಜಲ, ನುಡಿಯ ರಕ್ಷಣೆಗೆ ತಾವು ಬದ್ಧರಾಗಿರುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಅಲ್ಲದೇ ಪ್ರಾದೇಶಿಕ ಅಸಮತೋಲನ ನಿವಾರಣೆ, ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ಹೇಳಿದರು. ಅದಕ್ಕಿಂತಲೂ ಅಪರಾಧ ಮತ್ತು ಭಯೋತ್ಪಾದನೆ ಮುಕ್ತ ರಾಜ್ಯವನ್ನಾಗಿ ಮಾಡುವುದೇ ಪಕ್ಷದ ಮುಖ್ಯ ಗುರಿಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಐತಿಹಾಸಿಕ ಗೆಲುವಿಗೆ ಕಾರಣರಾದ ಪಕ್ಷದ ಹಿರಿಯರಾದ ಅರುಣ್ ಜೇಟ್ಲಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಆಯೋಗಕ್ಕೆ ಅಭಿನಂದನೆ: ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.
|