ಕನಿಷ್ಠ ಅಂತರದ ಜಯ: ಕುಮಟಾದಲ್ಲಿ ಜೆಡಿಎಸ್‌ನ ದಿನಕರ ಕೇಶವ ಶೆಟ್ಟಿ ಎದುರು ಕೇವಲ 20 ಮತಗಳ ಅಂತರದಲ್ಲಿ ಸೋತವರು ಕಾಂಗ್ರೆಸ್ ಅಭ್ಯರ್ಥಿ ಮೋಹನ ಕೃಷ್ಣ ಶೆಟ್ಟಿ.
ಅತ್ಯಧಿಕ ಅಂತರದ ಜಯ: ಬಿಜೆಪಿಯ ಎಸ್.ಎ.ರವೀಂದ್ರನಾಥ್ ಅವರು ದಾವಣಗೆರೆ ಕೇಂದ್ರ ಕ್ಷೇತ್ರದಲ್ಲಿ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ.ಎಂ.ಸತೀಶ್ ವಿರುದ್ಧ 53,661 ಮತಗಳ ಅಂತರದಿಂದ ಜಯಿಸಿರುವುದು ಗರಿಷ್ಠ ಅಂತರದ ವಿಜಯ.
ಎರಡನೇ ಅತಿ ಹೆಚ್ಚು ಅಂತರದ ಜಯ ದಾಖಲಿಸಿದವರು ಮಾಲೂರು ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎನ್.ಕೃಷ್ಣಯ್ಯ ಶೆಟ್ಟಿ. ಅವರೆದುರು 52,401 ಮತಗಳ ಅಂತರದಿಂದ ಸೋತವರು ಜೆಡಿಎಸ್‌ನ ಆರ್.ಪ್ರಭಾಕರ್.
ಧರ್ಮಸಿಂಗ್‌ಗೆ 52 ರನ್ ಕೊರತೆ: ಮಾಜಿ ಮುಖ್ಯಮಂತ್ರಿ ಎನ್.ಧರ್ಮ ಸಿಂಗ್ ಅವರ ದಾಖಲೆಯ 9ನೇ ಬಾರಿಗೆ ಗೆಲ್ಲುವ ಕನಸು ನುಚ್ಚುನೂರಾಗಿದ್ದು ಕೇವಲ 52 ಮತಗಳ ಅಂತರದಲ್ಲಿ. ಜೇವರ್ಗಿಯಲ್ಲಿ ಅವರನ್ನು ಸೋಲಿಸಿದವರು ಬಿಜೆಪಿಯ ದೊಡ್ಡಣಗೌಡ.
ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ರುದ್ರೇಶ್ ವಿರುದ್ಧ ಗೆದ್ದದ್ದು 47,260 ಮತಗಳ ಅಂತರದಲ್ಲಿ.
ಬಂಗಾರಪ್ಪ ಸೋಲು ಹೀನಾಯ: ಮಾಜಿ ಮುಖ್ಯಮಂತ್ರಿಗಳ ಕಾಡಾಕಾಡಿ ಹೋರಾಟ ನಿರೀಕ್ಷಿಸಿದ್ದ ಶಿಕಾರಿಪುರದಲ್ಲಿ ಭಾವೀ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಪಕ್ಷಗಳ ಬೆಂಬಲದೊಂದಿಗೆ ಕಣದಲ್ಲಿದ್ದ ಸೋಲಿಲ್ಲದ ಸರದಾರ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರನ್ನು ಸೋಲಿಸಿದ ಅಂತರ ಮಾತ್ರ ಬಂಗಾರಪ್ಪ ಅವರ ಜಂಘಾಬಲವನ್ನೇ ಉಡುಗಿಸಿದೆ. ಶಿಕಾರಿಪುರದಲ್ಲಿ 6ನೇ ಬಾರಿ ಗೆದ್ದು ಬಂದ ಯಡಿಯೂರಪ್ಪ ಅವರು ಬಂಗಾರಪ್ಪ ಪಾಳಯವನ್ನು ಶಿಕಾರಿಯಾಡಿದ್ದು 45,927 ಮತಗಳ ಮೂಲಕ.
|