ಸರಕಾರ ರಚಿಸಲು ಬಹುಮತದ ಕೊರತೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಎದುರಿಸುತ್ತಿರುವಂತೆಯೇ, ಪಕ್ಷೇತರರ ಮೇಲೆ ಎರಡೂ ಪಕ್ಷಗಳ ಕಣ್ಣು ಬಿದ್ದಿದ್ದು, ಹೊಸದೊಂದು ನಾಟಕಕ್ಕೆ ಚಾಲನೆ ದೊರೆತಿದೆ.
ಸರಕಾರ ರಚಿಸಲು ಬೆಂಬಲ ನೀಡುವಂತೆ ಬಿಜೆಪಿಯು ಪಕ್ಷೇತರರ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಕುರಿರು ರಾಜ್ಯಪಾಲರಿಗೆ ದೂರು ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ನಡುವೆ, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಗೆದ್ದು ಬಂದಿರುವ ಆರು ಮಂದಿ ಸ್ವತಂತ್ರ ಅಭ್ಯರ್ಥಿಗಳನ್ನು ಸೆಳೆದುಕೊಳ್ಳಲು ತೀವ್ರ ಶ್ರಮ ಆರಂಭಿಸಿದ್ದು, ಸರಕಾರ ರಚನೆಯ ಕಸರತ್ತು ಬಿರುಸುಗೊಂಡಿದೆ.
ಪಕ್ಷೇತರರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಮತ್ತು ಬಿಜೆಪಿ, ಜೆಡಿಎಸ್‌ಗಳಿಂದ ತಲಾ ಒಬ್ಬರು ಬಂಡಾಯ ಅಭ್ಯರ್ಥಿಗಳಿದ್ದಾರೆ.
ರಾಜ್ಯದ ಕಾಂಗ್ರೆಸ್ ನಾಯಕರು ಕೂಡ ಪಕ್ಷೇತರರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಹೆಸರು ಬಹಿರಂಗಪಡಿಸಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಪಕ್ಷದ ಮುಂದಿನ ಹೆಜ್ಜೆ ಕುರಿತು ಕೇಂದ್ರೀಯ ಹೈಕಮಾಂಡಿನಿಂದ ಯಾವುದೇ ಸೂಚನೆಗಳು ಬಂದಿಲ್ಲ ಎಂದೂ ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಮಾಡಬೇಕು ಎಂದು 28 ಸ್ಥಾನ ಕೈಯಲ್ಲಿ ಹಿಡಿದುಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈಗಾಗಲೇ ಹೇಳಿಕೆ ನೀಡಿದ್ದರೆ, ಇಬ್ಬರು ಪಕ್ಷೇತರರಂತೂ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದರೆ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿರುವು ಹಲವು ಕುತೂಹಲಗಳಿಗೆ ನಾಂದಿ ಹಾಡಿದೆ.
ಮೂರು ಮಂದಿಯ ಹುಡುಕಾಟದಲ್ಲಿರುವ ಬಿಜೆಪಿಯನ್ನು ಬೆಂಬಲಿಸದಂತೆ ಈಗಾಗಲೇ ನಾಲ್ಕು ಪಕ್ಷೇತರರಿಗೆ ಮನವಿ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಂಡಾಯ ವಿಜೇತರಾದ ನರೇಂದ್ರ ಸ್ವಾಮಿ ಮತ್ತು ವರ್ತೂರು ಪ್ರಕಾಶ್ ಅವರು ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ನಿರ್ಧಾರಕ್ಕೆ ತಾವು ಬದ್ಧ ಎಂದು ಅವರು ಪ್ರಕಟಿಸಿದ್ದಾರೆ.
ತಮಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕನಕಗಿರಿ ಅಭ್ಯರ್ಥಿ ಶಿವರಾಜ್ ತಂಗಡಗಿ ಬೆಂಬಲದ ಭರವಸೆ ದೊರೆತಿದೆ ಎಂದು ಬಿಜೆಪಿ ಹೇಳಿದೆ. ಅಂತೆಯೇ ಕಾಂಗ್ರೆಸ್ ಬಂಡುಕೋರರಾದ ನರೇಂದ್ರ ಸ್ವಾಮಿ, ವರ್ತೂರು ಪ್ರಕಾಶ್, ವೆಂಕಟರಮಣಪ್ಪ ಮತ್ತು ಸುಧಾಕರ್ ಅವರನ್ನು ಸೆಳೆಯುವ ಪ್ರಯತ್ನವೂ ಮುಂದುವರಿದಿದೆ.
ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಅವರು ಜೆಡಿಎಸ್ ಬಂಡಾಯ ಶಾಸಕ.
ಇದೀಗ ಲೆಕ್ಕಾಚಾರ ತಲೆಕೆಳಗಾಗಿಸುವ ತಂತ್ರಗಳು0-ಪ್ರತಿತಂತ್ರಗಳು ನಡೆಯುತ್ತಿದ್ದು, ಕಾಂಗ್ರೆಸ್ 80 ಮತ್ತು ಜೆಡಿಎಸ್ 28 ಸೇರಿದರೆ, ಬಹುಮತಕ್ಕೆ 5 ಸ್ಥಾನ ಬೇಕಾಗುತ್ತದೆ. 6 ಪಕ್ಷೇತರರನ್ನು ಸೆಳೆದರೆ ಸರಕಾರ ರಚಿಸುವ ಇರಾದೆ ಅದರದು. ಬಿಜೆಪಿಗೆ ಸರಕಾರ ರಚಿಸಲು ಮೂರು ಪಕ್ಷೇತರರು ಅಗತ್ಯವಿದೆ.
|