ಬಿಜೆಪಿ ಅತಿ ಹೆಚ್ಚು ಸೀಟು ಗಳಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಕನಸು ಹತ್ತಿರವಾಗುತ್ತಿದ್ದಂತೆ ಒಂದಲ್ಲ ಒಂದು ತೊಡಕುಗಳು ಎದುರಾಗುತ್ತಿವೆ. ಒಂದೆಡೆ ಮೂರು ಮಂದಿ ಪಕ್ಷೇತರರನ್ನು ಹೊಂದಿಸುವ ಕೆಲಸ ಕಷ್ಟಪಟ್ಟು ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್ ಈ ಕುರಿತು ಕ್ಯಾತೆ ಎತ್ತಿದೆ.
ಬಿಜೆಪಿಗೆ ಬೆಂಬಲ ನೀಡುವಂತೆ ಪಕ್ಷೇತರರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಗೆ ಸ್ಪಷ್ಟ ಬಹುಮತ ಬರದ ಕಾರಣ ಅದು ಪಕ್ಷೇತರ ಶಾಸಕರ ಮೇಲೆ ಬೆಂಬಲ ನೀಡುವಂತೆ ತೀವ್ರ ಒತ್ತಡ ಹೇರುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಆದ್ದರಿಂದ ನಾವು ಈ ಕುರಿತು ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದರು.
|