ಗದುಗಿನಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ದೇವಾಲಯದಲ್ಲಿ 12 ಗಂಟೆಗಳ ಕಾಲ ನಿರಂತರ ಘಂಟೆ ಬಾರಿಸುವುದಾಗಿ ಹರಕೆ ಹೊತ್ತಿದ್ದ ಯುವಕನೊಬ್ಬ ತನ್ನ ಇಚ್ಛೆ ನೆರವೇರಿರುವ ಕಾರಣ ಹರಕೆ ತೀರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗದುಗಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಶೈಲಪ್ಪ ಬಿದರೂರು ಗೆದ್ದರೆ, ನೇಕಾರ ಕಾಲೊನಿಯ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ದಿನವೀಡೀ ಘಂಟೆ ಬಾರಿಸುವುದಾಗಿ ಪಕ್ಷದ ಅಭಿಮಾನಿ ಶಂಕರಗಟ್ಟಿ ಚುನಾವಣೆಗೂ ಮೊದಲು ಹರಕೆ ಹೊತ್ತಿದ್ದರು.
ಆದರೆ, ಬಿಜೆಪಿ ಅಭ್ಯರ್ಥಿ ಎದುರು ಕಾಂಗ್ರೆಸ್ ಪಕ್ಷದ ಹುಲಕೋಟಿ ಎಚ್.ಕೆ. ಪಾಟೀಲ್ ಕಣಕ್ಕಿಳಿದಿದ್ದರು. ಇದು ಗೊತ್ತಿದ್ದರೂ ದೇವರ ಮೇಲೆ ನಂಬಿಕೆ ಇಟ್ಟು ಹರಕೆಗೆ ಪಣತೊಟ್ಟಿದ್ದರು. ಕೊನೆಗೆ ಎಚ್.ಕೆ. ಪಾಟೀಲ್ ಬಿದರೂರು ವಿರುದ್ಧ ಹೀನಾಯ ಸೋಲುಂಡರು. ಶಂಕರ್ ತಮ್ಮ ಹರಕೆಯನ್ನು ಪೂರೈಸಿದರು.
ಅದೇ ರೀತಿ ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರುವ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವನಗೌಡ ಆಯ್ಕೆಗೆ ಮುಸ್ಲಿಂ ಯುವಕ ಹಿಂದು ದೇವತೆಗೆ ಹರಕೆ ಹೊತ್ತಿರುವ ಘಟನೆ ನಡೆದಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಗೆದ್ದರೆ ಅರೆಕೇರಾದಿಂದ 8 ಕಿ.ಮೀ. ದೂರದ ಮುಷ್ಟೂರು ಗ್ರಾಮದ ಭಾಗಮ್ಮ ದೇವಿಗೆ ದೀರ್ಘ ದಂಡ ನಮಸ್ಕಾರ ಹಾಕುವುದಾಗಿ ಅರಕೇರಾ ಗ್ರಾಮದ ಅಬ್ದುಲ್ ಸಾಬ ಮಸ್ತಾನ್ ಸಾಬ ಎಂಬುವವನು ಹರಕೆ ಕಟ್ಟಿಕೊಂಡಿದ್ದರು. ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಭಾಗಮ್ಮದೇವಿಗೆ ಹರಕೆ ತೀರಿಸುವ ಮೂಲಕ ವಿಶಿಷ್ಟ ರಾಜಕೀಯ ಅಭಿಮಾನ ಮೆರೆದಿದ್ದಾರೆ.
|