ನಗರದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ನಡೆದ ಜಾತ್ಯತೀತ ಜನತಾದಳದ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಸಂಸದೀಯ ಮಂಡಳಿ ಅಧ್ಯಕ್ಷ ಡಿ. ಮಂಜುನಾಥ್, ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸೇರಿದಂತೆ ಚುನಾವಣೆಯಲ್ಲಿ ವಿಜೇತರಾದ ಪಕ್ಷದ 28 ಮಂದಿ ಶಾಸಕರು ಭಾಗವಹಿಸಿ, ಶಾಸಕಾಂಗ ಪಕ್ಷದ ನಾಯಕರನ್ನಾಗಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದರು.
ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಲು ವಿಫಲವಾಗಿರುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಅವರ ರಾಜೀನಾಮೆಯ ಕುರಿತು ಸಭೆಯಲ್ಲಿ ಚರ್ಚಿಸಿ, ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಸಲು ಪಕ್ಷ ಸಭೆಯಲ್ಲಿ ತಿರ್ಮಾನಿಸಿತು.
ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ಪಕ್ಷದ ಸೋಲಿನ ಕುರಿತು ಆತ್ಮಾವಲೋಕನ ಸಭೆಯನ್ನು ನಡೆಯಿತು. ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದೇ ಹೋದದ್ದು, ಸೀಟು ಹಂಚಿಕೆಯಲ್ಲಿ ಉಂಟಾದ ಗೊಂದಲ, ಅಧಿಕಾರದಲ್ಲಿದ್ದಾಗ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗೆಣಿಸಿದ್ದು, ಸೇರಿದಂತೆ ಹಲವು ವಿಷಯಗಳು ಪಕ್ಷದ ಸೋಲಿಗೆ ಕಾರಣವಾಯಿತು ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.
ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವ ಮೂಲಕ ಪಕ್ಷವನ್ನು ಮತ್ತೆ ಬುಡಮಟ್ಟದಿಂದ ಸಂಘಟಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
|