ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಬುಧವಾರ ನಡೆಯಲಿದ್ದು ಈ ವೇಳೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆಮಾಡಲಾಗುವುದು ಎನ್ನಲಾಗಿದೆ.
ಜೆಡಿಎಸ್ ಮತ್ತು ಪಕ್ಷೇತರರ ಜೊತೆ ಸೇರಿ ಸರಕಾರ ರಚನೆ ಪ್ರಯತ್ನದಿಂದ ದೂರ ಉಳಿದಿರುವ ಕಾಂಗ್ರೆಸ್, ನಾಳೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಲಿದೆ. ರಾಜ್ಯದಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಯತ್ನ ನಡೆಸದೆ ವಿರೋಧ ಪಕ್ಷದಲ್ಲಿ ಕುಳಿತು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕೆಂದು ಹೈಕಮಾಂಡ್ ಆದೇಶ ನೀಡಿದ್ದರಿಂದ ಸಮ್ಮಿಶ್ರ ಸರಕಾರದ ಪ್ರಯತ್ನವನ್ನು ಕಾಂಗ್ರೆಸ್ ಕೈಬಿಟ್ಟಿದೆ.
ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ತಲೆದಂಡವಾಗುವ ನೀರೀಕ್ಷೆ ಕಾಂಗ್ರೆಸ್ ಪಾಳಯದಲ್ಲಿ ವ್ಯಕ್ತವಾಗಿದ್ದು, ಅವರು ಕೆಪಿಸಿಸಿ ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ಮಾಜಿ ಉಪಮುಖ್ಯಮಂತ್ರಿ ಹಾಗೂ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿದ್ದ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಿದ್ದರಾಮಯ್ಯ ಅವರ ಆಯ್ಕೆ ಬಹುತೇಕ ಖಚಿತವಾಗಿದ್ದು, ನಾಳೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
|