ರಾಜ್ಯದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರದ ಹೊಸ್ತಿಲಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ನಿನ್ನೆ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಖುದ್ದಾಗಿ ಆಮಂತ್ರಿಸಿರುವ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸರ್ಕಾರ ರಚನೆಯ ಅಧಿಕೃತ ಆಹ್ವಾನ ಪತ್ರವನ್ನು ನೀಡಿದ್ದಾರೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯನ್ನು ಮಾಡುತ್ತಿದೆ.
ಈ ಮಧ್ಯೆ ಬಿಜೆಪಿಯಲ್ಲಿ ಇದೀಗ ಸಚಿವ ಸ್ಥಾನಕ್ಕಾಗಿ ಅರ್ಹರನ್ನು ಆಯ್ಕೆ ಮಾಡುವ ಕಸರತ್ತು ಆರಂಭಿಸಿದೆ. ಸರ್ಕಾರದ ಭದ್ರತೆಯ ದೃಷ್ಟಿಯಿಂದ ಆರೂ ಮಂದಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಮೊದಲ ಕಂತಿನಲ್ಲಿ ಮೂವರು ಹಾಗೂ ಎರಡನೇ ಕಂತಿನಲ್ಲಿ ಇನ್ನೂ ಮೂವರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.
ಅಲ್ಲದೆ, ಎಲ್ಲ ವರ್ಗದವರಿಗೂ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಕುರಿತು ಬಿಜೆಪಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲಿಂಗಾಯಿತ ವರ್ಗದಿಂದ ಜಗದೀಶ್ ಶೇಟ್ಟರ್, ಸಿ.ಎಂ. ಉದಾಸಿ, ಒಕ್ಕಲಿಗ ಸಮಾಜದಿಂದ ಆರ್. ಅಶೋಕ್, ಶಂಕರಲಿಂಗೇಗೌಡ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಶ್ರೀರಾಮುಲು, ಅರವಿಂದ ಲಿಂಬಾವಳಿ, ಹಿಂದುಳಿದ ವರ್ಗದಿಂದ ಕೆ.ಎಸ್. ಈಶ್ವರಪ್ಪ ಹಾಗೂ ಕರುಣಾಕರ ರೆಡ್ಡಿ, ಆರ್ಯ ವೈಶ್ಯ ವರ್ಗದಿಂದ ಡಿ.ಎಚ್. ಶಂಕರಮೂರ್ತಿ, ಮುಸ್ಲಿಂ ವರ್ಗದಿಂದ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿರುವ ಮುಮ್ತಾಜ್ ಅಲಿಖಾನ್, ಮಹಿಳಾ ವರ್ಗದಿಂದ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ವರ್ಗಗಳಿಂದ ಶಾಸಕರನ್ನು ಸಚಿವ ಸ್ಥಾನಕ್ಕಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
|