ನೂರಾರು ಜನರನ್ನು ಬಲಿ ತೆಗೆದುಕೊಂಡ ಕಳ್ಳಭಟ್ಟಿ ದುರಂತಕ್ಕೆ ಕಾರಣರಾದ ನಾಲ್ಕು ಪ್ರಮುಖ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಗೇಂದ್ರ, ಮುನೀರ್, ಅಬೂ ಹಾಗೂ ಸಮೀರ್ ಎಂಬವರು ಬಂಧನಕ್ಕೀಡಾಗಿದ್ದಾರೆ. ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಕಳ್ಳಭಟ್ಟಿ ದುರಂತದ ಜಾಡನ್ನು ಪೊಲೀಸರು ಬೇಧಿಸಿದ್ದಾರೆ.
ಪ್ರಮುಖ ಆರೋಪಿ ನಾಗೇಂದ್ರನು ಸಾಲ್ವೆಂಟ್ ರಾಸಾಯನಿಕ ಸರಬರಾಜು ಮಾಡುವ ಮಳಿಗೆ ಹೊಂದಿದ್ದು, ಅದನ್ನು ಈತ ಕೈಗಾರಿಕೆಗಳಿಗೆ ಮಾರುತ್ತಿದ್ದ. ಇವನಿಂದ ಆರು ಬ್ಯಾರೆಲ್ ಮೆಥಾನಾಲ್ ಎಂಬ ರಾಸಾಯನಿಕವನ್ನು ಮುನೀರ್ ಅನ್ನುವವನು ಖರೀದಿಸಿ ನೀರಿನೊಂದಿಗೆ ಬೆರೆಸಿ, ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಮೂಲಕ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಹಾಗೂ ತಮಿಳುನಾಡುಗಳಿಗೂ ಮುನೀರ್ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸ್ ಆಯುಕ್ತ ನೀಲಂ ಅಚ್ಯುತ ರಾವ್ ತಿಳಿಸಿದ್ದಾರೆ.
ಈ ಮಧ್ಯೆ ಕಳ್ಳಬಟ್ಟಿ ಸರಬರಾಜು ಮಾಡಿದ್ದ ಪ್ರಮುಖ ರೂವಾರಿ ಕಟ್ಟಿಗೇನಹಳ್ಳಿಯ ಮುಸ್ತು ಅಲಿಯಾಸ್ ಮುಸ್ತಾಕ್ ಶರೀಪ್ ಕಳೆದ 21ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
|