ರಾಜ್ಯದಲ್ಲಿ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿಯಲ್ಲಿದ್ದ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಸ್ಪೀಕರ್ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ಇದ್ದ ಪಕ್ಷದ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಸ್ಥಾನವನ್ನು ನಿರಾಕರಿಸಿದ್ದಾರೆ.
ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಶಾಸಕ ಜಗದೀಶ್ ಶೆಟ್ಟರ್ ಕೊನೆ ಗಳಿಗೆಯಲ್ಲಿ ಸಚಿವ ಸಂಪುಟ ಸ್ಥಾನದಿಂದ ವಂಚಿತರಾಗಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಅವರಿಗೆ ಸ್ಪೀಕರ್ ಹುದ್ದೆ ನೀಡಲಾಗುವುದು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆಟ್ಟರ್, ಸ್ಪೀಕರ್ ಸ್ಥಾನ ಸ್ವೀಕರಿಸಲು ನಾಯಕರು ತನ್ನ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಸಭಾಧ್ಯಕ್ಷ ಸ್ಥಾನದಿಂದ ಉತ್ತರ ಕನಾಟಕ ಅಭಿವೃದ್ದಿ ಅಸಾಧ್ಯ. ಈ ನಿಟ್ಟಿನಲ್ಲಿ ಸ್ಪೀಕರ್ ಸ್ಥಾನಕ್ಕೆ ತಾನು ಒಪ್ಪುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನ ತಪ್ಪಿರುವುದನ್ನು ವಿರೋಧಿಸಿ ಹುಬ್ಬಳ್ಳಿಯ ವಿದ್ಯಾನಗರದ ಬಿಜೆಪಿ ಕಾರ್ಯಕರ್ತರು ಬಸ್ಸಿಗೆ ಕಲ್ಲು ತೂರಾಟ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಕೆ ಮೇಯರ್ ಸೇರಿದಂತೆ ಪಾಲಿಕೆ ಸದಸ್ಯರು ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
|