ಕಳೆದ ಚುನಾವಣೆಯ ಬಳಿಕ ಸಮ್ಮಿಶ್ರ ಸರ್ಕಾರದ ಮೂಲಕ ಮುಖ್ಯಮಂತ್ರಿ ಹುದ್ದೆ ಧರಂಸಿಂಗ್ ಅವರಿಗೆ ತಾನಾಗಿಯೇ ಒಲಿದು ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಧರಂಸಿಂಗ್ ಅವರನ್ನು ಜೇವರ್ಗಿ ಜನತೆ ತಿರಸ್ಕರಿಸಿದ್ದರು. ಆದರೆ ಈಗ ಧರ್ಮಸಿಂಗ್‌ಗೆ ಮತ್ತೆ ಶುಕ್ರದೆಸೆ ಕಾಣಿಸಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಗೆ ನೇಮಕ ಮಾಡುವ ಸಂಭವ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗುತ್ತಿದೆ.
ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಕೇವಲ 52 ಮತಗಳ ಅಂತರದಿಂದ ಸೋತಿರುವ ಧರ್ಮಸಿಂಗ್ ಅವರಿಗೆ ಮಹಾರಾಷ್ಟ್ರದದ ರಾಜ್ಯಪಾಲ ಹುದ್ದೆ ಅಥವಾ ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷವು ನಿರ್ಧರಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾದ ಬಳಿಕ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತುರ್ತು ಬುಲಾವ್ ಮೇರೆಗೆ ಧರಂ ದಿಲ್ಲಿಗೆ ತೆರಳಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಿಸುವ ಕುರಿತು ಪ್ರಯತ್ನಗಳು ನಡೆದಿವೆ. ಅಲ್ಲದೆ, ಬೀದರ್‌ನಿಂದ ಲೋಕಸಭೆಗೆ ಸ್ಪರ್ಧಿಸಿದರೆ ಹೆಚ್ಚು ಅನುಕೂಲ ಎಂದು ಕೆಲವು ಪ್ರಮುಖರು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಬಗೆಗಿನ ಅಂತಿಮ ನಿರ್ಧಾರ ಇನ್ನೊಂದು ವಾರದಲ್ಲಿ ಹೊರಬೀಳುವ ಸಾಧ್ಯತೆಗಳಿವೆ.
|