ಬೆಳಗಾವಿ: ಭಯೋತ್ಪಾದನೆಗೆ ನೆರವಾದ ಶಂಕೆಯ ಮೇಲೆ ಬಂಧನಕ್ಕೀಡಾಗಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದು, ಬಾಂಬ್ ತಯಾರಿಸಲು ಆರೋಪಿಗಳು ಸಂಚು ನಡೆಸುತ್ತಿದ್ದರು ಎಂಬ ವಿಚಾರ ಹೊರಗೆಡಹಿದ್ದಾರೆ. ಗ್ಯಾಸ್ ಸಿಲಿಂಡರ್ ಬಳಸಿ ಬಾಂಬ್ ಸ್ಫೋಟಕ್ಕೆ ಆರೋಪಿಗಳು ಸಂಚು ರೂಪಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಈ ಕುರಿತ ಸಮಗ್ರ ಮಾಹಿತಿಯುಳ್ಳ ಅಪಾಯಕಾರಿ ಅಂಶಗಳ ಡಿಸ್ಕ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ರಾಘವೇಂದ್ರ ಔರಾದ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದ್ದು, ಸರಕಾರಕ್ಕೆ ಬೆದರಿಕೆಯೊಡ್ಡುವ ತಂತ್ರವಾಗಿ ಭಯೋತ್ಪಾದನೆ ಹೆಚ್ಚುತ್ತಿರುವ ಬಗ್ಗೆ ಗುಮಾನಿ ಇದೆ ಎಂದವರು ಸಂಶಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಬಿಗಿ ಭದ್ರತೆಯನ್ನು ಮಾಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾಗೂ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಬೆಳಗಾವಿಯ ಭಯೋತ್ಪಾದಕರ ಬಗ್ಗೆ ವ್ಯಾಪಕ ತನಿಖೆ ನಡೆಯುತ್ತಿದ್ದು, ನಾಳೆ ಬೆಳಗ್ಗೆ ವೇಳೆಗೆ ಆತಂಕಕಾರಿ ಮಾಹಿತಿಗಳು ಹೊರಬರುವ ಸೂಚನೆಯಿದೆ ಎಂದು ಮೂಲಗಳು ತಿಳಿಸಿವೆ.
|