ಐವರು ಪಕ್ಷೇತರ ಶಾಸಕರ ನೆರವಿನೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಎರುತ್ತಿದ್ದಂತೆ ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಸಚಿವ ಸ್ಥಾನದ ನಿರೀಕ್ಷೆ ಹೊಂದಿದ್ದ ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿದ್ದ ಸ್ಪೀಕರ್ ಸ್ಥಾನವನ್ನು ನಿರಾಕರಿಸಿ ಶಾಸಕನಾಗಿ ಮುಂದುವರಿಯುವೆ ಎಂದು ಪಟ್ಟು ಹಿಡಿದಿದ್ದಾರೆ.
ತಾವು ಶಾಸಕರಾಗಿ ಮುಂದುವರೆಯುತ್ತೇನೆ. ವಿನಃ ಯಾವುದೇ ಕಾರಣಕ್ಕಾಗಿ ಸ್ಪೀಕರ್ ಹುದ್ದೆ ಸ್ವೀಕರಿಸುವುದಿಲ್ಲ. ತಮಗಾಗಿರುವ ಅನ್ಯಾಯದ ಕುರಿತು ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸ್ಪೀಕರ್ ಆಗಿ ಜಗದೀಶ್ ಶೆಟ್ಟರ್ ನೇಮಕಗೊಳ್ಳಲಿದ್ದಾರೆ. ಆದೇನೇ ಆಂತರಿಕ ಭಿನ್ನಮತಗಳಿದ್ದರೂ, ಪರಸ್ಪರ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರ ಸ್ಥಾನಮಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರ ಸ್ಥಾನ ಮಾನದ ಕುರಿತು ಅಂತಿಮ ಪಟ್ಟಿಯನ್ನು ಅಧಿವೇಶನದ ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಮಧ್ಯೆ ಪಕ್ಷದಲ್ಲಿ ಎದ್ದಿರುವ ಆಂತರಿಕ ಭಿನ್ನಮತ ಶಮನಕ್ಕಾಗಿ ನಾಳೆ ದೆಹಲಿಗೆ ರಾಜ್ಯ ನಾಯಕರು ಭೇಟಿ ನೀಡಲಿದ್ದು, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದೆ. ಆ ಸಂದರ್ಭದಲ್ಲಿ ಪಕ್ಷದೊಳಗಿನ ಭಿನ್ನಮತದ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
|