ಸದನದಲ್ಲಿ ಬಹುಮತ ಸಾಬೀತು ಪಡಿಸಿದ ಬಳಿಕವಷ್ಟೇ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರಕಾರಕ್ಕೆ ತಿಳಿಸಿರುವ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಹೇಳಿಕೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯಪಾಲರ ಈ ನಿರ್ಧಾರ ಕಾನೂನು ಸಮ್ಮತವಾಗಿದೆ. ಆದರೆ ಬಿಜೆಪಿ ಪ್ರಚಾರಕ್ಕಾಗಿ ಇದನ್ನು ಬಳಸಿಕೊಂಡು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ ಎಂದು ದೂರಿದರು.
ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ ಎಂಬ ಬಿಜೆಪಿಯ ಹೇಳಿಕೆಯನ್ನು ಖಂಡಿಸಿದ ಅವರು, ಬಿಜೆಪಿ ಹೇಳಿಕೆ ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ರಾಜ್ಯಪಾಲರು ತಮ್ಮ ಕಾರ್ಯವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ಸಮರ್ಥವಾಗಿ ಆಡಳಿತ ನಡೆಸಲು ವಿಫಲವಾಗಿರುವ ಬಿಜೆಪಿ, ರಾಜ್ಯದ ಜನತೆಗೆ ರಾಜ್ಯಪಾಲರ ಕುರಿತು ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
|