ನಗರದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂಲಾಲ್ ತೆಲಗಿ ಇಂದು ನಗರಕ್ಕೆ ಕರೆತರಲಾಗಿದ್ದು, ನಗರದ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ.
ನಾಳೆ ಸಿಟಿ ಮಾರ್ಕೆಟ್‌ನಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಲ್ಲಿ ಹಾಜರಾಗಬೇಕಿರುವದರಿಂದ ನಗರಕ್ಕೆ ಕರೆತರಲಾಗಿದೆ. ನಗರದಲ್ಲಿ ಐದು ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದು, ಸಿಟಿ ಮಾರ್ಕೆಟ್‌ನಲ್ಲಿ ಎರಡು, ಯಶವಂತಪುರ, ಉಪ್ಪಾರಪೇಟೆ ಹಾಗೂ ಮಡಿವಾಳ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಇವುಗಳಲ್ಲಿ ಸಿಟಿ ಮಾರ್ಕೆಟ್ ಪ್ರಕರಣ ಒಂದರಲ್ಲಿ ಈಗಾಗಲೇ ದೋಷಮುಕ್ತ ಎಂದು ನ್ಯಾಯಾಲಯ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಿಟಿಮಾರ್ಕೆಟ್‌ನಲ್ಲಿ ದಾಖಲಾಗಿರುವ ಇನ್ನೊಂದು ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ. ಈ ನಿಟ್ಟಿನಲ್ಲಿ ತೆಲಗಿ ಹಾಜರಾತಿ ಅನಿವಾರ್ಯವಾಗಿದೆ. ಅಲ್ಲದೆ, ತಾಂತ್ರಿಕ ದೋಷದಿಂದಾಗಿ ಮಹಾರಾಷ್ಟ್ರದಿಂದ ನೇರ ವಿಡಿಯೋ ಕಾನ್ಪೆರೆನ್ಸ್ ಮೂಲಕ ವಿಚಾರಣೆ ನಡೆಸಲು ಅಸಾಧ್ಯವಾಗಿರುವುದರಿಂದ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಸದ್ಯದ ಮಟ್ಟಿಗೆ ತೆಲಗಿಗೆ ಯಾವ ವಿಚಾರಣೆ ಇಲ್ಲದಿರುವುದರಿಂದ ಇಲ್ಲಿನ ಕೇಸು ಮುಗಿಯುವವರೆಗೆ ಇಲ್ಲಿಯೇ ಇರಿಸಿಕೊಳ್ಳಲಾಗುವುದು ಎಂಬ ಬಗ್ಗೆ ಪೊಲೀಸರು ಸುಳಿವು ನೀಡಿದ್ದಾರೆ.
|