ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪಾಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಜೆಡಿಎಸ್‌ಗೆ ಸೆಡ್ಡುಹೊಡೆದು ಕಾಂಗ್ರೆಸ್‌ಗೆ ಬಂದಿರುವ ಸಿದ್ದರಾಮಯ್ಯ ಅವರ ಅರ್ಹತೆಗೆ ತಕ್ಕಂತೆ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಈ ನಿಟ್ಟಿನಲ್ಲಿ ಪ್ರತಿಪಕ್ಷ ಸ್ಥಾನದ ನೀರೀಕ್ಷೆಯಲ್ಲಿದ್ದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ನಡೆ ಬೇಸರ ತರಿಸಿದೆ.
ಅಲ್ಲದೆ, ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ಸನ್ನು ಮತ್ತೆ ಪ್ರತಿಷ್ಠಾಪಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಸಿದ್ದು ಅವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡಬೇಕೆಂಬುದು ಸಿದ್ದು ಬೆಂಬಲಿಗರ ಆಗ್ರಹವಾಗಿತ್ತು.
ಏತನ್ಮಧ್ಯೆ, ಸಿದ್ದರಾಮಯ್ಯನವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸಿದೆ. ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಸಿದ್ದರಾಮಯ್ಯನವರಿಗೆ ನೀಡಲು ಸಿದ್ದವಿದೆಯಾದರೂ, ಸಿದ್ದರಾಮಯ್ಯನವರು ಈ ಹುದ್ದೆಯನ್ನು ನಿರಾಕರಿಸಿದ್ದಾರೆಂದು ಹೇಳಲಾಗಿದೆ.
|