ರಾಜ್ಯ ಸಚಿವ ಸಂಪುಟದಲ್ಲಿ ತನೆಗ ಸ್ಥಾನ ನೀಡದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ವಿರುದ್ಧ ಜಗದೀಶ್ ಶೆಟ್ಟರ್ ಬಹಿರಂಗವಾಗಿ ಕಿಡಿ ಕಾರಿದ್ದು, ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಬೀದಿಗೆ ಬಂದಂತಾಗಿದೆ.
ಬಿಜೆಪಿ ಗೆದ್ದಿರುವ 110 ಸ್ಥಾನಗಳಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ನನ್ನೊಬ್ಬನ ಮೇಲೆಯೇ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರ ಕುತಂತ್ರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನಾನು ತಲೆ ಎತ್ತಲು ಅವಕಾಶ ಕೊಡಬಾರದೆಂಬ ಉದ್ದೇಶದಿಂದ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಈ ತಂತ್ರ ಹೆಣೆದಿದ್ದಾರೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಭಿನ್ನಮತೀಯ ಚಟುವಟಿಕೆಗಳಿಗೆ ನಾನೇನು ಇಳಿದಿಲ್ಲ. ಆದರೆ ಸ್ಪೀಕರ್ ಸ್ಥಾನವನ್ನು ಮಾತ್ರ ಒಪ್ಪುವುದಿಲ್ಲ ಎಂದು ಅವರು ಖಾರವಾಗಿ ನುಡಿದ್ದಾರೆ.
ಈ ಮಧ್ಯೆ ಜಗದೀಶ್ ಶೆಟ್ಟರ್ ಸೇರಿದಂತೆ ಮೂವರು ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದರಿಂದ ಉಲ್ಬಣಿಸಿರುವ ಬಿಕ್ಕಟ್ಟು ಶಮನಕ್ಕೆ ಬಿಜೆಪಿ ವರಿಷ್ಠರು ತೀವ್ರ ಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜಗದೀಶ್ ಶೆಟ್ಟರ್ ಅವರನ್ನು ರಾಷ್ಟ್ರೀಯ ನಾಯಕರು ದೆಹಲಿಗೆ ಕರೆಸಿಕೊಂಡಿದ್ದಾರೆ.
|