ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಪ್ರವೇಶದ ಸಿಇಟಿ ಕೌನ್ಸಿಲಿಂಗ್ ಸೋಮವಾರ ನಗರದಲ್ಲಿ ಆರಂಭಗೊಂಡಿದೆ.
ಮೊದಲ ದಿನವಾದ ಇಂದು ವಿಶೇಷ ವರ್ಗಗಳ ಅಡಿಯಲ್ಲಿ ಸೀಟು ಆಯ್ಕೆಗೆ ಚಾಲನೆ ನೀಡಲಾಯಿತು. ಅಂಗವಿಕಲ, ಯೊಜನಾನಿರಾಶ್ರಿತ, ಕ್ರೀಡಾ, ಮಾಜಿ ಸೈನಿಕರ ಮಕ್ಕಳ ಕೋಟಾಗಳ ಸೀಟುಗಳಿಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ನಡೆದಿದೆ.
ಇದೇ ತಿಂಗಳ ಮೂರು ಮತ್ತು ನಾಲ್ಕರಂದು ಎನ್ಸಿಸಿ ಕೋಟಾದ ವಿದ್ಯಾರ್ಥಿಗಳು ಹಾಗೂ ಐದು ಹಾಗೂ ಆರರಂದು ಕ್ರೀಡಾ ಕೋಟಾದ ವಿದ್ಯಾರ್ಥಿಗಳು, 7ರಂದು ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ತಮ್ಮ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಸಿಇಟಿ ಘಟಕದ ವಿಶೇಷ ಅಧಿಕಾರಿ ಸೈಯ್ಯದ್ ಜಮಾಲ್ ತಿಳಿಸಿದ್ದಾರೆ.
ಆ ಬಳಿಕ ಇದೇ ತಿಂಗಳ 9ರಿಂದ ವೈದ್ಯಕೀಯ ವಿಭಾಗದ ಸಾಮಾನ್ಯ ಕೌನ್ಸಿಲಿಂಗ್ ಆರಂಭವಾಗಲಿದ್ದು, 16ರಿಂದ ಇಂಜಿನಿಯರಿಂಗ್ ಕೌನ್ಸಿಲಿಂಗ್ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.
|