ರಾಜ್ಯದಲ್ಲಿ ಮುಂಗಾರು ಮಳೆಯ ಆವಾಂತರ ಮುಂದುವರಿದಿದ್ದು, ಸಿಡಿಲು ಬಡಿದು 15 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆಯಿಂದ ಜನತೆ ತತ್ತರಿಸಿದ್ದು, ಸಿಡಿಲಿನ ಆರ್ಭಟ ಅನೇಕರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ.
ಬಿಜಾಪುರ ಜಿಲ್ಲೆಯಲ್ಲಿ ಐವರು, ತುಮಕೂರು, ಹಾವೇರಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ರಭಸಕ್ಕೆ ಗುಡಿಸಲು ಕುಸಿದು ಮಗುವೊಂದು ಮೃತಪಟ್ಟಿದೆ. ಇಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಸುಮಾರು 15 ಲಕ್ಷ ರೂ. ಮೌಲ್ಯದ ತೋಟದ ಬೆಳೆಗಳು ನಾಶವಾಗಿವೆ.
ಮಳೆಯ ಆರ್ಭಟಕ್ಕೆ ಅನೇಕ ಕುರಿಗಳು ಕೂಡ ಬಲಿಯಾಗಿವೆ. ಗುಲ್ಬರ್ಗದಲ್ಲಿ 40, ಚಾಮರಾಜ ನಗರ ಮತ್ತು ಬಿಜಾಪುರ ಜಿಲ್ಲೆಯಲ್ಲಿ ತಲಾ ನಾಲ್ಕು ಕುರಿಗಳು ಸೇರಿ ಒಟ್ಟು 48 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಿಡಿಲು ಬಡಿದು ಏಳು ಮಂದಿ ಗಾಯಗೊಂಡಿದ್ದಾರೆ. ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿಯೂ ಭರ್ಜರಿ ಮಳೆಯಾಗಿದ್ದು ಜನ ಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತು.
|